ಕೋಲ್ಕೊತಾ: ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ಶುಕ್ರವಾರ ನಡೆದ ಐಪಿಎಲ್ನ 19ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 23 ರನ್‌ಗಳಿಂದ ಜಯ ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಕೆಕೆಆರ್ ನಾಯಕ ನಿತೀಶ್ ರಾಣಾ ಅವರು ಉಮ್ರಾನ್ ಮಲಿಕ್ ಅವರ ಓವರ್ನಲ್ಲಿ ತೋರಿದ ಬ್ಯಾಟಿಂಗ್ ವೈಭವದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ಸನ್ರೈಸರ್ಸ್ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ ಅವರು ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 228 ರನ್ ಬಾರಿಸಿತು. ಜವಾಬಿತ್ತ ಕೆಕೆಆರ್ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಗಳಿಸಲಷ್ಟೇ ಶಕ್ತವಾಯಿತು.
ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಕೆಕೆಆರ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. 20 ರನ್ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ರಹ್ಮನುಲ್ಲಾ ಗುರ್ಬಜ್ (0) ಹಾಗೂ ವೆಂಕಟೇಶ್ ಅಯ್ಯರ್ (10) ಬೇಗನೆ ವಿಕೆಟ್ ಒಪ್ಪಿಸಿದರೆ, ಸುನೀಲ್ ನರೈನ್ ಕೂಡ ಶೂನ್ಯಕ್ಕೆ ಔಟಾದರು. ಈ ವೇಳೆ ಕ್ರೀಸ್ಗೆ ಬಂದ ನಾಯಕ ನಿತೀಶ್ ರಾಣಾ (75) ಸಿಡಿದು ನಿಂತು ತಂಡಕ್ಕೆ ಆಸರೆಯಾದರು.
ಇದನ್ನೂ ಓದಿ IPL 2023: ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್; ಆರ್ಸಿಬಿ ಎದುರಾಳಿ
ಉಮ್ರಾನ್ ಮಲಿಕ್ ಅವರ ಮೊದಲ ಓವರ್ನಲ್ಲಿಯೇ ಎರಡು ಭರ್ಜರಿ ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ ಒಟ್ಟು 28 ರನ್ ಬಾರಿಸಿದರು. ಈ ವಿಡಿಯೊ ವೈರಲ್ ಆಗಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ರಿಂಕು ಸಿಂಗ್ ಅವರು 5 ಸಿಕ್ಸರ್ ಬಾರಿಸಿ ಮಿಂಚಿದ್ದರು. ಇದೀಗ ರಾಣಾ ಅವರ ಈ ಪ್ರದರ್ಶನ ಕಂಡು ಕ್ರಿಕೆಟ್ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಈ ಓವರ್ನಲ್ಲಿ ಸರಿಯಾಗಿ ದಂಡಿಸಿಕೊಂಡ ಕಾರಣ ಉಮ್ರಾನ್ಗೆ ಪಂದ್ಯದ ಅಂತಿಮ ಓವರ್ ನೀಡಲಾಯಿತು. ಇಲ್ಲಿ ಅವರು ಶಾರ್ದುಲ್ ಠಾಕೂರ್ ಅವರ ವಿಕೆಟ್ ಕೆಡವಿದರು. ಎರಡು ಓವರ್‌ಗಳಿಗೆ 36 ರನ್ ನೀಡಿ ಒಂದು ವಿಕೆಟ್ ಪಡೆದರು.