ಸಿಡ್ನಿ: ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ 16ನೇ(IPL 2023) ಆವೃತ್ತಿಗೆ ಅಖಾಡ ಸಜ್ಜಾಗುತ್ತಿದೆ. ಆದರೆ ಒಂದೆಡೆ ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬೀಳುತ್ತಿರುವುದು ಎಲ್ಲ ಫ್ರಾಂಚೈಸಿಗಳಿಗೂ ದೊಡ್ಡ ಆತಂಕ ಸೃಷ್ಟಿಸಿದೆ. ಈ ಮಧ್ಯೆ ಈ ಬಾರಿಯ ಆಟಗಾರರ ಹರಾಜಿನಲ್ಲಿ ಯಾವುದೇ ತಂಡದ ಪಾಲಾಗದೆ, ಅನ್ ಸೋಲ್ಡ್ ಆಗಿದ್ದ ಆಸೀಸ್ ಆಟಗಾರ ಸ್ಟೀವನ್ ಸ್ಮಿತ್(Steven Smith) ಐಪಿಎಲ್ಗೆ ಮರಳುವುದಾಗಿ ಹೇಳಿದ್ದಾರೆ.
ಐಪಿಎಲ್ ಟೂರ್ನಿಗೆ ಕಮ್ಬ್ಯಾಕ್ ಮಾಡುವ ವಿಚಾರವನ್ನು ಸ್ಟೀವನ್ ಸ್ನಿತ್ ತಮ್ಮ ಅಧಿಕೃತ ಟ್ವಿಟರ್ ಮೂಲಕ ತಿಳಿಸಿದ್ದಾರೆ. “ನಮಸ್ತೆ ಇಂಡಿಯಾ. ನಾನು ನಿಮಗಾಗಿ ಕೆಲವು ರೋಚಕ ಸುದ್ದಿಗಳನ್ನು ಹೇಳಲು ಬಯಸುತ್ತೇನೆ. ನಾನು 2023ರ ಐಪಿಎಲ್ ಟೂರ್ನಿಗೆ ಆಗಮಿಸಲು ರೆಡಿಯಾಗಿದ್ದೇನೆ. ಹೌದು, ನಾನು ಭಾರತದಲ್ಲಿ ಅಸಾಧಾರಣ ತಂಡವೊಂದನ್ನು ಸೇರುತ್ತಿದ್ದೇನೆ” ಎಂದಿದ್ದಾರೆ.
ಸದ್ಯ ಸ್ಟೀವನ್ ಸ್ಮಿತ್ ಅವರು ಯಾವ ರೂಪದಲ್ಲಿ ಐಪಿಎಲ್ ಭಾಗವಾಗಿರಲಿದ್ದಾರೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಕೆಲ ವರದಿಗಳ ಪ್ರಕಾರ ಸ್ಮಿತ್ ಅವರು ಈ ಬಾರಿ ಕಾಮೆಂಟ್ರಿ ಮಾಡಲಿದ್ದಾರೆ ಎಂದು ಹೇಳಿದೆ. ಇನ್ನೊಂದೆಡೆ ಗಾಯಗೊಂಡು ಕೆಲ ಆಟಗಾರರು ಈ ಟೀರ್ನಿಯಿಂದ ಹೊರ ಬಿದ್ದಿದ್ದಾರೆ ಒಂದೊಮ್ಮೆ ಸ್ಮಿತ್ ಅವರು ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆಗೊಂಡಿರುವ ಸಾಧ್ಯತೆಯೂ ಇದೆ. ಈ ಎಲ್ಲ ಅನುಮಾನಗಳಿಗೆ ಶುಕ್ರವಾರ ತೆರೆ ಬೀಳಲಿದೆ.
ಇದನ್ನೂ ಓದಿ IPL 2023: ಐಪಿಎಲ್ ಆಡಲಿದ್ದಾರಾ ಜಸ್ಪ್ರೀತ್ ಬುಮ್ರಾ? ವಿಡಿಯೊ ಮೂಲಕ ಸುಳಿವು ನೀಡಿದ ಫ್ರಾಂಚೈಸಿ
ಆಸೀಸ್ ತಂಡದ ಸ್ಟಾರ್ ಆಟಗಾರ ಸ್ಟೀವನ್ ಸ್ಮಿತ್ ಇದುವರೆಗೆ 6 ಐಪಿಎಲ್ ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಪುಣೆ ವಾರಿಯರ್ಸ್ ಇಂಡಿಯಾ, ಕೊಚ್ಚಿ ಟಸ್ಕರ್ಸ್ ಕೇರಳ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಅವರು ಆಡಿದ್ದಾರೆ. ಜತೆಗೆ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದಾರೆ. 2017ರ ಐಪಿಎಲ್ನಲ್ಲಿ ಸ್ಮಿತ್ ನಾಯಕತ್ವದಲ್ಲಿ ಪುಣೆ ಸೂಪರ್‌ಜೈಂಟ್ಸ್ ಫೈನಲ್ ಪ್ರವೇಶಿಸಿತ್ತು. ಆದರೆ ಇಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಒಂದು ರನ್ ಅಂತರದಿಂದ ಸೋತು ನಿರಾಸೆ ಅನುಭವಿಸಿತ್ತು.