ಮುಂಬಯಿ: ಗಾಯದ ಮಧ್ಯೆಯೂ ಏಕಾಂಗಿಯಾಗಿ ಹೋರಾಟ ನಡೆಸಿದ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್(104) ಅವರ ಅಮೋಘ ಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 185 ರನ್ ಗಳಿಸಿ ಸವಾಲೊಡ್ಡಿದೆ.
ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿದೆ. ಎದುರಾಳಿ ಮುಂಬೈ ಇಂಡಿಯನ್ಸ್ ಗೆಲುವಿಗೆ 186 ರನ್ ಬಾರಿಸಬೇಕಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕ ನಿರ್ಧಾರವನ್ನು ಮುಂಬೈ ಬೌಲರ್ಗಳು ಸಮರ್ಥಿಸಿಕೊಂಡರು. ಕೆಕೆಆರ್ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್(8) ಮತ್ತು ಎನ್. ಜಗದೀಶನ್(0) ವಿಕೆಟ್ ಉಡಾಯಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಆದರೆ ಇವರ ಈ ಮುನ್ನಡೆ ಹೆಚ್ಚು ಕಾಲ ನಡೆಯಲಿಲ್ಲ. ಈ ವಿಕೆಟ್ ಪತನದ ಬಳಿಕ ಆಡಲಿಳಿದ ವೆಂಕಟೇಶ್ ಅಯ್ಯರ್(Venkatesh Iyer) ಅವರು ಸಿಡಿದು ನಿಂತು ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಶತಕ ಬಾರಿಸಿ ಸಂಭ್ರಮಿಸಿದ ವೆಂಕಟೇಶ್ ಅಯ್ಯರ್
ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ ವೆಂಕಟೇಶ್ ಅಯ್ಯರ್ ಅವರು ಮುಂಬೈ ಬೌಲರ್ಗಳ ಮೇಲೆ ಸವಾರಿ ನಡೆಸಿದರು. ಇದರ ಮಧ್ಯೆ 13 ರನ್ ಗಳಿಸಿದ್ದ ವೇಳೆ ಅವರ ಮಂಡಿಗೆ ಚೆಂಡು ಬಡಿದು ಗಾಯಗೊಂಡರು. ಈ ಗಾಯದ ಮಧ್ಯೆಯೂ ಛಲ ಬಿಡದೆ ಆಟ ಮುಂದುವರಿಸಿದ ಅವರು ಅಮೋಘ ಶತಕ ಸಿಡಿಸಿ ಸಂಭ್ರಮಿಸಿದರು. ಇದು ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ದಾಖಲಾದ ಎರಡನೇ ಶತಕವಾಗಿದೆ. ಇದಕ್ಕೂ ಮುನ್ನ ಸನ್ರೈಸರ್ಸ್ ತಂಡದ ಹ್ಯಾರಿ ಬ್ರೂಕ್ ಶತಕ ಬಾರಿಸಿದ್ದರು. ವೆಂಕಟೇಶ್ ಅಯ್ಯರ್ ಅವರ ಚೊಚ್ಚಲ ಐಪಿಎಲ್ ಶತಕ ಇದಾಗಿದೆ. ಒಟ್ಟು 51 ಎಸೆತ ಎದುರಿಸಿದ ಅವರು ಬರೋಬ್ಬರಿ 9 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 104 ರನ್ ಗಳಿಸಿದರು. ಇವರ ವಿಕೆಟ್ ರಿಲೆ ಮೆರೆಡಿತ್ ಪಾಲಾಯಿತು.
ಇದನ್ನೂ ಓದಿ IPL 2023: ಕಳೆದ ಬಾರಿಯ ಫೈನಲಿಸ್ಟ್ಗಳ ಮಧ್ಯೆ ಹೈ ವೋಲ್ಟೇಜ್ ಪಂದ್ಯ
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಯಾರು ಊಹಿಸದ ರೀತಿಯಲ್ಲಿ ಬ್ಯಾಟಿಂಗ್ ನಡೆಸಿ ಸುದ್ದಿಯಾಗಿದ್ದ ಶಾರ್ದೂಲ್ ಠಾಕೂರ್ ಅವರು ಈ ಪಂದ್ಯದಲ್ಲಿ ಬ್ಯಾಟಿಂಗ್ ಭಡ್ತಿ ಪಡೆದು ಬಂದರೂ ತಂಡಕ್ಕೆ ಯಾವುದೇ ದೊಡ್ಡ ಲಾಭವಾಗಲಿಲ್ಲ. 13 ಎಸೆತಗಳಿಂದ 11 ರನ್ ಗಳಿಸಿದರು. ಬಾರಿಸಿದ್ದು ಒಂದೇ ಬೌಂಡರಿ. ನಾಯಕ ನಿತೀಶ್ ರಾಣ ಕೂಡ 5 ರನ್ ಗಳಿಸಿ ಆಟ ಮುಗಿಸಿದರು. ಈ ವಿಕೆಟ್ ಪಡೆದ ಸಂಭ್ರಮದಲ್ಲಿ ಹೃತಿಕ್ ಶೋಕೀನ್ ಅವರು ರಾಣಾಗೆ ಏನೋ ಹೇಳಿದರು. ಈ ವೇಳೆ ರಾಣ ಆಕ್ರೋಶಗೊಂಡು ಮೈದಾನದಲ್ಲೇ ಮಾತಿನ ಚಕಮಕಿ ನಡೆಯಿತು. ಬಳಿಕ ಮುಂಬೈ ಆಟಗಾರರು ಮಧ್ಯೆ ಪ್ರವೇಶಿಸಿ ಈ ಪರಿಸ್ಥಿತಿಯನ್ನು ತಣ್ಣಗಾಗಿಸಿದರು.
ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿದ್ದ ರಿಂಕು ಸಿಂಗ್ ಅವರು ಈ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ವೈಭವವನ್ನು ತೋರಿಸುವಲ್ಲಿ ವಿಫಲರಾದರು. ಎಸೆತವೊಂದಕ್ಕೆ ರನ್ ಗಳಿಸಿದ ಅವರು 18 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ಆ್ಯಂಡ್ರೆ ರಸೆಲ್ 11 ಎಸೆತಗಳ ಮುಂದೆ 21 ರನ್ ಬಾರಿಸಿ ಅಜೇಯರಾಗಿ ಉಳಿದರು. ಅವರ ಈ ಬ್ಯಾಟಿಂಗ್ ನೆರವಿನಿಂದ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಮುಂಬೈ ಪರ ಹೃತಿಕ್ ಶೋಕೀನ್ 2 ವಿಕೆಟ್ ಕಿತ್ತು ಮಿಂಚಿದರು.
ಅರ್ಜುನ್ ತೆಂಡೂಲ್ಕರ್ ಪದಾರ್ಪಣೆ
ಕಳೆದ ಎರಡು ಆವೃತ್ತಿಗಳಲ್ಲಿಯೂ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಪುತ್ರ ಅರ್ಜುನ್ ತೆಂಡೂಲ್ಕರ್(Arjun Tendulkar) ಅವರು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದರು. ರೋಹಿತ್ ಶರ್ಮ ಅವರು ಕ್ಯಾಪ್ ನೀಡಿ ತಂಡಕ್ಕೆ ಬರಮಾಡಿಕೊಂಡರು. ಇದೇ ವೇಳೆ ತಮ್ಮನ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ಅಕ್ಕ ಸಾರಾ ತೆಂಡೂಲ್ಕರ್ ಕೂಡ ಉಪಸ್ಥಿತರಿದ್ದರು. ಆದರೆ ಅವರು ಈ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾದರು. 2 ಓವರ್ ಎಸೆದ ಅವರು 17 ರನ್ ಬಿಟ್ಟುಕೊಟ್ಟರು.