ಅಹಮದಾಬಾದ್: ಸಾಯಿ ಸುದರ್ಶನ್(53) ಮತ್ತು ವಿಜಯ್ ಶಂಕರ್(ಅಜೇಯ 63) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ವಿರುದ್ಧ ಗುಜರಾತ್ ಟೈಟನ್ಸ್(Gujarat Titans) 204 ರನ್ ಗಳಿಸಿದೆ. ಕೆಕೆಆರ್ ಗೆಲುವಿಗೆ 205 ರನ್ ಬಾರಿಸಬೇಕಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾನುವಾರದ ಐಪಿಎಲ್ನ(IPL 2023) ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟನ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿ ಸವಾಲೊಡ್ಡಿದೆ.
ಇನಿಂಗ್ಸ್ ಆರಂಭಿಸಿದ ಗುಜರಾತ್ ಪರ ಶುಭಮನ್ ಗಿಲ್ ಮತ್ತು ವೃದ್ಧಿಮಾನ್ ಸಾಹಾ ನಿಧಾನಗತಿಯ ಆಟವಾಡಿದರು. ಕಳೆದ ಪಂದ್ಯಗಳಲ್ಲಿ ತೋರಿದ ಬ್ಯಾಟಿಂಗ್ ಅಬ್ಬರ ಈ ಪಂದ್ಯದಲ್ಲಿ ಕಂಡು ಬರಲಿಲ್ಲ. ಎಸೆತವೊಂದಕ್ಕೆ ರನ್ ಗಳಿಸಿಸುತ್ತಾ ಸಾಗಿದರು. ಸಾಹಾ 17 ಎಸೆತಗಳಿಂದ 17 ರನ್ ಗಳಿಸಿ ಸುನಿಲ್ ನಾರಾಯಣ್ಗೆ ವಿಕೆಟ್ ಒಪ್ಪಿಸಿದರು. ಗಿಲ್ 31 ಎಸೆತಗಳಿಂದ 5 ಬೌಂಡರಿ ಬಾರಿಸಿ 39 ರನ್ಗೆ ಆಟ ಮುಗಿಸಿದರು. ಈ ವಿಕೆಟ್ ಕೂಡ ನಾರಾಯಣ್ ಪಾಲಾಯಿತು. ಸಾಹಾ ಮತ್ತು ಗಿಲ್ ಮೊದಲ ವಿಕೆಟ್ಗೆ 33 ರನ್ ಜತೆಯಾಟ ನಡೆಸಿತು.
ಈ ವಿಕೆಟ್ ಪತನದ ಬಳಿಕ ಆಡಲಿಳಿದ ಸಾಯಿ ಸುದರ್ಶನ್ ಅವರು ಕೆಕೆಆರ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡಕ್ಕೆ ಆಸರೆಯಾದರು. ಇದೇ ವೇಳೆ ಅವರು ಅರ್ಧಶತಕವನ್ನೂ ಪೂರ್ತಿಗೊಳಿಸಿದರು. ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಅವರು ಆ ಬಳಿಕ ಸಿಡಿಯಲಾರಂಭಿಸಿದರು. ಅಭಿನವ್ ಮನೋಹರ್ ಅವರು ಸತತ ಬೌಂಡರಿ ಬಾರಿಸಿ ಅಪಾಯಾಕಾರಿಯಾಗುವ ಸೂಚನೆ ನೀಡಿದರೂ ಅವರ ಓಟ ಮೂರೇ ಬೌಂಡರಿಗೆ ಕೊನೆಗೊಂಡಿತು. 8 ಎಸೆತದಲ್ಲಿ 12 ರನ್ಗಳ ಕೊಡುಗೆ ನೀಡಿದರು. 38 ಎಸೆತ ಎದುರಿಸಿದ ಸಾಯಿ ಸುದರ್ಶನ್ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದರು.
ಅಂತಿಮ ಹಂತದಲ್ಲಿ ವಿಜಯ್ ಶಂಕರ್ ಸಿಡಿದು ನಿಂತ ಪರಿಣಾಮ ತಂಡ ಬೃಹತ್ ಮೊತ್ತ ದಾಖಲಿಸಿತು. ಶಾರ್ದೂಲ್ ಠಾಕೂರ್ ಅವರ ಅಂತಿಮ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಮಿಂಚಿದರು. ಕೊನೆಯ 14 ಎಸೆತದಲ್ಲಿ ಗುಜರಾತ್ಗೆ 50 ರನ್ ಹರಿದು ಬಂತು. ಕೇವಲ 21 ಎಸೆತಗಳಲ್ಲಿ ವಿಜಯ್ ಶಂಕರ್ ಅರ್ಧಶತಕ ಬಾರಿಸಿದರು. ಒಟ್ಟು 24 ಎಸೆತ ಎದುರಿಸಿದ ಅವರು ಬರೋಬ್ಬರಿ 5 ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಸಿಡಿಸಿ ಅಜೇಯ 63 ರನ್ ಬಾರಿಸಿದರು.
2 ಸಾವಿರ್ ರನ್ ಪೂರೈಸಿದ ಶುಭಮನ್ ಗಿಲ್
ಈ ಪಂದ್ಯದಲ್ಲಿ ಶುಭಮನ್ ಗಿಲ್ ಅವರು 23ರನ್ ಗಳಿಸಿದ ವೇಳೆ ಐಪಿಎಲ್ನಲ್ಲಿ 2 ಸಾವಿರ ರನ್ ಪೂರ್ತಿಗೊಳಿಸಿದರು. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಟೀಮ್ ಇಂಡಿಯಾದ ಎರಡನೇ ಆಟಗಾರ ಎಂಬ ಹಿರಿಮೆಗೂ ಪಾತ್ರರಾದರು. ಪಂತ್ ಅವರು 23 ವರ್ಷ 27 ದಿನಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್ ಅವರು 23 ವರ್ಷ 214 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇನ್ನು ಅತಿ ಕಡಿಮೆ ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ ಏಳನೇ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು. ಗಿಲ್ ಈ ಮೇಲುಗಲ್ಲು ತಲುಪಲು 74 ಇನಿಂಗ್ಸ್ ತೆಗೆದುಕೊಂಡರು. ಕೆ.ಎಲ್. ರಾಹುಲ್ ಅವರು 60 ಇನಿಂಗ್ಸ್ನಲ್ಲಿ 2 ಸಾವಿರ ರನ್ ಪೂರೈಸಿ ಅಗ್ರ ಸ್ಥಾನ ಪಡೆದಿದ್ದಾರೆ. ಸಚಿನ್ ತೆಂಡೂಲ್ಕರ್ 63 ಇನಿಂಗ್ಸ್ನಲ್ಲಿ ಈ ಸಾಧನೆ ಮಾಡಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ IPL 2023: ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ; ಮುಂಬೈ ಕೋಚ್ ಹೇಳಿಕೆ
ಖಾಯಂ ನಾಯಕ ಹಾರ್ದಿಕ್ ಪಾಂಡ್ಯ ಅವರು ಅನಾರೋಗ್ಯದಿಂದ ಬಳಲಿದ ಕಾರಣ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ರಶೀದ್ ಖಾನ್ ತಂಡದ ನಾಯಕತ್ವ ವಹಿಸಿಕೊಂಡರು. ಪಾಂಡ್ಯ ಬದಲು ವಿಜಯ್ ಶಂಕರ್ ಅವರು ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆದರು.