ಹೈದರಾಬಾದ್: ಕಿಂಗ್ ಖ್ಯಾತಿಯ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಶತಕ ಬಾರಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಕೊಹ್ಲಿ ಅವರು ಶತಕ ಬಾರಿಸುತ್ತಿದಂತೆ ಭಾರತ ಮಾತ್ರವಲ್ಲದೇ ಅನೇಕ ದೇಶದ ಮಾಜಿ ಕ್ರಿಕೆಟ್ ದಿಗ್ಗಜರು ಕೊಹ್ಲಿಯ ಈ ಶತಕದ ಇನಿಂಗ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ನೀಡಿದ ಗುರಿಯನ್ನು ಬೆನ್ನಟ್ಟುವ ವೇಳೆ ಜವಾಬ್ದಾರಿಯುತ ಆಟವಾಡಿದ ಕೊಹ್ಲಿ 62 ಎಸೆತಗಳಿಂದ ಅಮೋಘ ಶತಕ ಸಿಡಿಸಿ ಔಟಾದರು. ನಾಲ್ಕು ವರ್ಷಗಳ ನಂತರ ಐಪಿಎಲ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. 12 ಬೌಂಡರಿ ಮತ್ತು 4 ಸಿಕ್ಸರ್ ಅವರ ಈ ಇನಿಂಗ್ಸ್ನಲ್ಲಿ ಒಳಗೊಂಡಿತ್ತು.
ಕೊಹ್ಲಿಯ ಅತ್ಯಮೋಘ ಶತಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ”ಮೊದಲ ಎಸೆತದಿಂದಲೇ ಕವರ್ ಡ್ರೈವ್ ಆಡಿದಾಗಲೇ ಇದು ವಿರಾಟ್ ಕೊಹ್ಲಿಯ ದಿನ ಎಂಬುದು ನನಗೆ ಸ್ಪಷ್ಟವಾಗಿತ್ತು. ವಿರಾಟ್ ಮತ್ತು ಡು ಪ್ಲೆಸಿಸ್ ಇಬ್ಬರೂ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಭರ್ಜರಿ ಹೊಡೆತ ಮಾತ್ರವಲ್ಲದೆ ಯಶಸ್ವಿ ಜತೆಯಾಟದೊಂದಿಗೆ, ಸ್ಟ್ರೈಕ್ ಬದಲಾವಣೆ ಮೂಲಕವೂ ಉತ್ತಮ ರನ್ ಗಳಿಸಿದರು. ಇಬ್ಬರ ಬ್ಯಾಟಿಂಗ್ ಎದುರು 186 ರನ್ ದೊಡ್ಡ ಮೊತ್ತವಾಗಿರಲಿಲ್ಲ” ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕೂಡ ಕೊಹ್ಲಿಯನ್ನು ಕೊಂಡಾಡಿದ್ದು, ”All rise for the King, ಎಂತಹ ಅದ್ಭುತ ಇನಿಂಗ್ಸ್, ಪಂದ್ಯ ವೀಕ್ಷಿಸುವುದೇ ಒಂದು ಖುಷಿ!” ಎಂದು ಯುವರಾಜ್ ಸಿಂಗ್ ಟ್ವೀಟ್ನಲ್ಲಿ ಬಣ್ಣಿಸಿದ್ದಾರೆ.
“ಕ್ರಿಕೆಟ್ನಲ್ಲಿ ಇದು ಅದ್ಭುತ ದಿನ, ವಿರಾಟ್ ಕೊಹ್ಲಿ ಬ್ಯಾಟಿಂಗ್ ನೈಪುಣ್ಯತೆ ಹಾಗೂ ದೃಢತೆಯನ್ನು ಪ್ರದರ್ಶಿಸಿದ್ದಾರೆ. ನಿಜವಾದ ಬ್ಯಾಟಿಂಗ್ ಪ್ರತಿಭೆ! ಫಾಫ್ ಇನ್ನಿಂಗ್ಸ್ ಕೂಡ ಅದ್ಭುತವಾಗಿತ್ತು” ಎಂದು ಸುರೇಶ್ ರೈನಾ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ IPL 2023 : ಎಸ್ಆರ್ಎಚ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡದಲ್ಲಿ ಸೃಷ್ಟಿಯಾದ ದಾಖಲೆಗಳ ಪಟ್ಟಿ ಇಲ್ಲಿದೆ
ವಿರಾಟ್ ಕೊಹ್ಲಿಯ ಈ ಶತಕಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಆಮೀರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ”ಅದ್ಭುತ ಇನಿಂಗ್ಸ್, ವಿರಾಟ್ ಕೊಹ್ಲಿ ಕ್ರಿಕೆಟ್ನ ಏಕೈಕ ನಿಜವಾದ ಕಿಂಗ್” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೀಗೆ ಹಲವು ಕ್ರಿಕೆಟಿಗರು ಕೊಹ್ಲಿಯ ಈ ಇನಿಂಗ್ಸ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.