ಮುಂಬಯಿ: ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿಗೂ ಅವರ ಜೆರ್ಸಿ ನಂ.18ಕ್ಕೂ ಅವಿನಾಭಾವ ಸಂಬಂಧವಿದೆ. ಕೊಹ್ಲಿ ಅವರು ಈ ನಂಬರ್ ಇಷ್ಟಪಟ್ಟು ಪಡೆಯದಿದ್ದರೂ ಅವರಿಗೆ ಸಿಕ್ಕ ಅದೃಷ್ಟ ಮತ್ತು ಭಾವನಾತ್ಮಕ ಜೆರ್ಸಿ ನಂಬರ್ ಇದಾಗಿದೆ. ಸ್ವತಃ ಈ ಮಾತನ್ನು ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಅವರು ತನ್ನ ಜೆರ್ಸಿ ನಂ.18ರ ಬಗ್ಗೆ ಹಲವು ವಿಚಾರವನ್ನು ಹಂಚಿಕೊಂಡಿದ್ದಾರೆ. “ನಾನು ಅಂಡರ್ 19 ಕ್ರಿಕೆಟ್ಗೆ ಪದಾರ್ಪಣೆ ಮಾಡಿದಾಗ ನನಗೆ 18 ನಂಬರ್ನ ಜೆರ್ಸಿ ನೀಡಲಾಗಿತ್ತು. ಅಂದಿನಿಂದ ಈ ನಂ. ನನ್ನ ಬದುಕಿನಲ್ಲಿ ವಿಶೇಷವಾಗಿದೆ. ಈ ನಂಬರ್ನಲ್ಲಿ ಎಷ್ಟು ಸಂತಸವಿದೋ ಅಷ್ಟೇ ನೋವು ಕೂಡ ಇದೆ’ ಎಂದು ಕೊಹ್ಲಿ ಹೇಳಿದರು.
“ನನಗೆ ಯಾವುದೇ ನಂಬರ್ ಬಗ್ಗೆಯೂ ನಂಬಿಕೆ ಇರಲಿಲ್ಲ. ಅಂಡರ್-19ನಲ್ಲಿ 18 ನಂ. ಸಿಕ್ಕ ಬಳಿಕ 2008ರಲ್ಲಿ ನಾನು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದೆ. ಕಾಕತಾಳಿಯ ಎಂಬಂತೆ ಅಂದು ದಿನಾಂಕ ಕೂಡ 18 ಆಗಿತ್ತು. ಈ ಮೂಲಕವೂ ನನಗೆ 18 ನಂ. ಅದೃಷ್ಟವಾಗಿ ಬಂತು. ಆದರೆ ನನ್ನ ತಂದೆಯ ನಿಧನ ಕೂಡ ಡಿಸೆಂಬರ್ 18ಕ್ಕೆ ಆಯಿತು. ಹೀಗಾಗಿ ಈ ನಂ. ಕಂಡಾಗ ನನ್ನ ಸಾಧನೆ ಜತೆಗೆ ತಂದೆಯ ಸಾವಿನ ದಿನವೂ ನನ್ನ ಕಣ್ಣ ಮುಂದೆ ಬರುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕಾದರೆ ಇದು ನನಗೆ ದೇವರೇ ನೀಡಿದ ಸಂಖ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಈ ಅಂಕಿಗೆ ಏನಾಗುತ್ತದೋ ತಿಳಿದಿಲ್ಲ” ಎಂದು ಹೇಳಿದರು. ಅಚ್ಚರಿ ಎಂದರೆ ವಿರಾಟ್ ಕೊಹ್ಲಿ 18 ತಾರೀಕಿನಂದೆ ಐಪಿಎಲ್ನಲ್ಲಿ ಎರಡು ಶತಕವನ್ನೂ ಬಾರಿಸಿ ಮಿಂಚಿದ್ದಾರೆ.
ಇದನ್ನೂ ಓದಿ IPL 2023: ವಿರಾಟ್ ಬ್ಯಾಟಿಂಗ್ ಕೊಂಡಾಡಿದ ಕ್ರಿಕೆಟ್ ದಿಗ್ಗಜರು; ಪಾಕ್ ಆಟಗಾರನಿಂದಲೂ ಪ್ರಶಂಸೆ
ಕ್ರಿಸ್ ಗೇಲ್ ದಾಖಲೆ ಸರಿಗಟ್ಟಿದ ಕೊಹ್ಲಿ
sನ್ರೈಸರ್ಸ್ ಹೈದರಾಬಾದ್ ವಿರುದ್ಧ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರು ತನ್ನದೇ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ಅವರ ದಾಖಲೆಯೊಂದನ್ನು ಸರಿಗಟ್ಟಿದರು. ಐಪಿಎಲ್ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಆಟಗಾರರಲ್ಲಿ ಕೊಹ್ಲಿ ಇದೀಗ ಜಂಟಿಯಾಗಿ ಅಗ್ರ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಮತ್ತು ಗೇಲ್ ಅವರು 6 ಐಪಿಎಲ್ ಶತಕ ಬಾರಿಸಿದ್ದಾರೆ. ಸದ್ಯ ಕೊಹ್ಲಿ ಇನ್ನೊಂದು ಶತಕ ಬಾರಿಸಿದರೆ ಗೇಲ್ ದಾಖಲೆಯನ್ನು ಮುರಿಯಲಿದ್ದಾರೆ. ರಾಜಸ್ಥಾನ್ ತಂಡದ ಜೋಸ್ ಬಟ್ಲರ್ 5 ಶತಕ ಸಿಡಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.