ಬೆಂಗಳೂರು: ವಿರಾಟ್ ಕೊಹ್ಲಿಗೂ ಏಪ್ರಿಲ್ 23 ಆಗಿಬರುವುದಿಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ತವರಿನ ಪಂದ್ಯದಲ್ಲಿ ಕೊಹ್ಲಿ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಏಪ್ರಿಲ್ 23 ರಂದು ಆಡಿದ ಪ್ರತಿ ಪಂದ್ಯದಲ್ಲಿಯೂ ಕೊಹ್ಲಿ ಡಕೌಟ್ ಆದ ಅವಮಾನಕ್ಕೆ ಒಳಗಾದರು.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್ಸಿಬಿ ಮೊದಲ ಎಸೆತದಲ್ಲಿಯೇ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ ಅವರು ಟ್ರೆಂಟ್ ಬೌಲ್ಟ್ ಅವರು ಎಸೆದ ಮೊದಲ ಎಸೆತದಲ್ಲೇ ಎಲ್ಬಿಡಬ್ಲ್ಯುಗೆ ಬಲಿಯಾದರು. ಈ ಮೂಲಕ ಮತ್ತೆ ಕೊಹ್ಲಿ ಏಪ್ರಿಲ್ 23ಕ್ಕೆ ಶೂನ್ಯ ಸುತ್ತಿದರು. 2017, ಎಪ್ರಿಲ್ 23, 0(1), 2022, ಎಪ್ರಿಲ್ 23, 0(1), 2023, ಎಪ್ರಿಲ್ 23, 0(1) ಇದು ಕೊಹ್ಲಿಯ ಏಪ್ರಿಲ್ 23ರ ಶೂನ್ಯ ಸಾಧನೆಯ ಪಟ್ಟಿ
ಏಪ್ರಿಲ್ 23ಕ್ಕೆ ವಿರಾಟ್ ಅವರು ಶೂನ್ಯ ಸುತ್ತಿದ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲು ಕಂಡಿತ್ತು. ಇದೀಗ ರಾಜಸ್ಥಾನ್ ವಿರುದ್ಧ ಆರ್ಸಿಬಿ 9 ವಿಕೆಟ್ ನಷ್ಟಕ್ಕೆ 189 ರನ್ಗಳಿಸಿ ಸವಾಲೊಡ್ಡಿದೆ. ಆದರೆ ಈ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ. ಸೋತರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಭವಿಷ್ಯವೇ ಆರ್ಸಿಬಿಗೆ ವಿರುದ್ಧವಾಗಿದೆ. ಗೆದ್ದರೆ ಮಾತ್ರ ಭವಿಷ್ಯ ಸುಳ್ಳಾಗಲಿದೆ.
ಇದನ್ನೂ ಓದಿ IPL 2023: ಮ್ಯಾಕ್ಸ್ವೆಲ್-ಡು ಪ್ಲೆಸಿಸ್ ಅರ್ಧಶತಕ; ರಾಜಸ್ಥಾನ್ ಗೆಲುವಿಗೆ 190 ರನ್ ಗುರಿ
ಅರ್ಧಶತಕ ಬಾರಿಸಿ ಮಿಂಚಿದ ಮ್ಯಾಕ್ಸ್ವೆಲ್-ಡುಪ್ಲೆಸಿಸ್
12 ರನ್ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದ ತಂಡಕ್ಕೆ ಮೂರನೇ ವಿಕೆಟ್ಗೆ ಜತೆಯಾದ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಸೇರಿಕೊಂಡು ಸ್ಫೋಟಕ ಬ್ಯಾಟಿಂಗ್ ಮೂಲಕ ಆಸರೆಯಾದರು. ಪ್ರತಿ ಓವರ್ಗೆ ಸರಾಸರಿ 10ರಂತೆ ರನ್ ಗಳಿಸಿದ ಈ ಜೋಡಿ ರಾಜಸ್ಥಾನ್ ಬೌಲರ್ಗಳ ಎಸೆತಗಳನ್ನು ಧೂಳಿಪಟ ಮಾಡಿದರು. ಉಭಯ ಆಟಗಾರರ ಬ್ಯಾಟಿಂಗ್ ಆರ್ಭಟದ ಮುಂದೆ ರಾಜಸ್ಥಾನ್ ಬೌಲರ್ಗಳು ದಿಕ್ಕಾಪಾಲಾದರು.
ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ ಮ್ಯಾಕ್ಸ್ವೆಲ್ ಮತ್ತು ಡು ಪ್ಲೆಸಿಸ್ ಕಡಿಮೆ ಎಸೆತಗಳ ಮುಂದೆ ಅರ್ಧಶತಕ ಪೂರೈಸಿದರು. ಡು ಪ್ಲೆಸಿಸ್ 39 ಎಸೆತ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 62 ರನ್ ಬಾರಿಸಿ ರನೌಟ್ ಆದರು. ಮ್ಯಾಕ್ಸ್ವೆಲ್ ಕೇವಲ 44 ಎಸೆತದಲ್ಲಿ 77 ರನ್ ಸಿಡಿಸಿದರು. ಈ ಇನಿಂಗ್ಸ್ ವೇಳೆ 4 ಸಿಕ್ಸರ್ ಮತ್ತು 6 8 ಬೌಂಡರಿ ದಾಖಲಾಯಿತು. ಮೂರನೇ ವಿಕೆಟ್ಗೆ 127 ರನ್ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಇವರ ಈ ಬ್ಯಾಟಿಂಗ್ ಸಾಹಸದಿಂದ ಆರ್ಸಿಬಿ ಬೃಹತ್ ಮೊತ್ತ ದಾಖಲಿಸಿತು.