ಲಖನೌ: ಸೋಮವಾರ ರಾತ್ರಿ (ಮೇ 1ರಂದು) ನಡೆದ ಐಪಿಎಲ್ 16ನೇ ಆವೃತ್ತಿಯ ಪಂದ್ಯವು ಆಟಕ್ಕಿಂತ ಜಗಳದಿಂದಲೇ ಫುಲ್ ಫೇಮಸ್ ಆಗಿದೆ. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ಗಲಾಟೆ ದೊಡ್ಡ ಮಟ್ಟಿಗೆ ಸುದ್ದಿಗೆ ಗ್ರಾಸವಾಗಿದ್ದರೆ, ಅಫಘಾನಿಸ್ತಾನ ತಂಡದ ಬೌಲರ್ ನವೀನ್ ಉಲ್ ಹಕ್ ಹಾಗೂ ಕೊಹ್ಲಿ ನಡುವಿವ ಜಗಳ ನಿಧಾನವಾಗಿ ಕಿಚ್ಚು ಹಚ್ಚುತ್ತಿದೆ. ಇದೀಗ ಮಾಡಿದ ತಪ್ಪಿಗೆ ಒಬ್ಬೊಬ್ಬರೇ ದಂಡ ಕಟ್ಟಬೇಕು ಎಂದು ಐಪಿಎಲ್ ಆದೇಶ ಹೊರಡಿಸಿದೆ. ಅಂತೆಯೇ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್‌ಗೆ ನಿನ್ನೆಯ ಪಂದ್ಯದ ಫುಲ್ ಸಂಭಾವನೆ ಕಡಿತ ಮಾಡಲಾಗಿದೆ. ನಿನ್ನೆ ಆಡಿದ್ದಕ್ಕೆ ಅವರಿಬ್ಬರಿಗೆ ಸಂಬಳವೇ ಇಲ್ಲ. ಅಂದ ಹಾಗೆ ಕೊಹ್ಲಿ ಒಂದು ಪಂದ್ಯಕ್ಕೆ 1.07 ಕೋಟಿ ರೂಪ ಪಡೆದರೆ, ಗಂಭೀರ್ 25 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಾರೆ. ಇದೇ ವೇಲೆ ಲಖನೌ ಸೂಪರ್ ಜಯಂಟ್ಸ್ ತಂಡದ ಆಟಗಾರ ಹಾಗೂ ಅಫಘಾನಿಸ್ತಾನದ ವೇಗಿ ನವೀನ್ ಉಲ್ ಹಕ್‌ಗೂ ಶೇಕಡಾ 50 ಸಂಬಳ ಕಡಿತ ಮಾಡಲಾಗಿದೆ. ಅವರು 1.79 ಲಕ್ಷ ರೂಪಾಯಿ ಪಾವತಿಸಬೇಕಾಗಿದೆ.
ಪಂದ್ಯದ ರೆಫರಿ ಈ ಮೂವರಿಗೂ ದಂಡ ವಿಧಿಸಿದ್ದು ಇಂಥ ಘಟನೆಗಳನು ಮುಂದುವರಿಯಬಾರದೂ ಎಂದು ಹೇಳಿದ್ದಾರೆ. ಮೂವರೂ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ದಂಡ ಕಟ್ಟಲಿದ್ದಾರೆ. ಐಪಿಎಲ್ ಕೋಡ್ ಆಫ್ ಕಂಡಕ್ಟ್ ಎರಡನೇ ಹಂತದ ಅಪರಾಧವೆಸಗಿದ ಕಾರಣ ಕೊಹ್ಲಿ ಹಾಗೂ ಗಂಭೀರ್‌ಗೆ ದುಬಾರಿ ದಂಡ ವಿಧಿಸಲಾಗಿದೆ.
“ಲಖನೌದ ಅಟಲ್ ಬಿಹಾರಿ ವಾಜಪೇಯಿ ಏಕನಾ ಮೈದಾನದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ ಕಾರಣ ಲಖನೌ ಸೂಪರ್ ಜಯಂಟ್ಸ್ ಮೆಂಟರ್ ಗೌತಮ್ ಗಂಭೀರ್‌ಗೆ ಪಂದ್ಯದ ಶುಲ್ಕದಲ್ಲಿ ಶೇ. 100 ರಷ್ಟು ದಂಡವನ್ನು ವಿಧಿಸಲಾಗಿದೆ,” ಎಂದು ಐಪಿಎಲ್ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: Virat kohli : ವಿರಾಟ್ ಕೊಹ್ಲಿಯನ್ನು ಮೊದಲ ಬಾರಿ ಹೊಗಳಿದ ಗೌತಮ್ ಗಂಭೀರ್!
ಕೊಹ್ಲಿ ಹಾಗೂ ಗಂಭೀರ್ ಜಗಳ ಇದೇ ಮೊದಲೇನಲ್ಲ. 10 ವರ್ಷಗಳ ಹಿಂದೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಣ ಪಂದ್ಯದಲ್ಲಿಯೂ ಇವರಿಬ್ಬರೂ ಜಗಳವಾಡಿಕೊಂಡಿದ್ದರು. ಆಗ ಇಬ್ಬರೂ ಪ್ರತಿಸ್ಪರ್ಧಿ ಆಟಗಾರರು. ವಿರಾಟ್ ಕೊಹ್ಲಿ ಈಗಲೂ ಆರ್ಸಿಬಿ ಆಟಗಾರ. ಗೌತಮ್ ಗಂಭೀರ್ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿ ಇದೀಗ ಎಲ್‌ಎಸ್‌ಜಿ ತಂಡಕ್ಕೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜತೆಗೆ ಅವರು ದೆಹಲಿಯ ಲೋಕಸಭಾ ಸದಸ್ಯ ಕೂಡ.
ನವೀನ್ ಉಲ್ ಹಕ್‌ಗೂ ದಂಡ
ಪಂದ್ಯದ ಚೇಸಿಂಗ್ ವೇಳೆ ಲಖನೌ ಸೂಪರ್ ಜಯಂಟ್ಸ್ ಆಟಗಾರ 17ನೇ ಓವರ್‌ನಲ್ಲಿ ಬೌಂಡರಿ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿಯನ್ನು ಗುರಾಯಿಸಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಮಿತ್ ಮಿಶ್ರಾ ಹಾಗೂ ಫೀಲ್ಡ್ ಅಂಪೈರ್ ಮಧ್ಯೆ ಪ್ರವೇಶಿಸಿದ ಬಳಿಕ ಪರಿಸ್ಥಿತಿ ತಣ್ಣಗಾಗಿತ್ತು. ಕೋಪಗೊಂಡಿದ್ದ ವಿರಾಟ್ ಅಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಅವರಿಬ್ಬರೂ ಕೈ ಕುಲುಕುವ ವೇಳೆಯೂ ಜಗಳವಾಡಿಕೊಂಡಿದ್ದರು. ಅದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಲಕ್ನೋ ತಂಡದ ನಾಯಕ ಕೆ. ಎಲ್ ರಾಹುಲ್ ಮಾತನಾಡುತ್ತಾ ನಿಂತಿದ್ದ ಅಲ್ಲಿಗೆ ಹೋಗಿದ್ದ ನವೀನ್ ಕೊಹ್ಲಿಯನ್ನು ಕೆಣಕಿದ್ದರು.
“ಐಪಿಎಲ್ ಕೋಡ್ ಆಫ್ ಕಂಡಕ್ಟ್ 2.21ರ ನಿಯಮದ ಮೊದಲನೇ ಹಂತದ ಅಪರಾಧವೆಸಗಿದ ಕಾರಣ ಲಖನೌ ಸೂಪರ್ ಜಯಂಟ್ಸ್ ಆಟಗಾರ ನವೀನ್ ಉಲ್ ಹಕ್ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 50 ರಷ್ಟು ದಂಡವನ್ನು ವಿಧಿಸಲಾಗಿದೆ. ಇದಕ್ಕೆ ಲಖನೌ ವೇಗಿ ಒಪ್ಪಿಕೊಂಡಿದ್ದಾರೆ,” ಎಂದು ಐಪಿಎಲ್ ತಿಳಿಸಿದೆ.