ಮುಂಬಯಿ: ಕೆಕೆಆರ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿ ಐಪಿಎಲ್ ಕ್ರಿಕೆಟ್ನಲ್ಲಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಬಗ್ಗೆ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೋಲ್ಕೊತ್ತಾದ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ನೂತನ ದಾಖಲೆ ಬರೆದರು. ಈ ಹಿಂದೆ ಕೆ.ಎಲ್ ರಾಹುಲ್ ಅವರು 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದರು. ಪ್ಯಾಟ್ ಕಮಿನ್ಸ್ ಕೂಡ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ ಇದೀಗ ಉಭಯ ಆಟಗಾರರ ದಾಖಲೆಯನ್ನು ಜೈಸ್ವಾಲ್ ಮುರಿದಿದ್ದಾರೆ.
ಆರಂಭದಿಂದಲೂ ಸಿಕ್ಸರ್ ಬೌಂಡರಿಗಳ ಸುರಿ ಮಳೆ ಸುರಿಸಿದ ಜೈಸ್ವಾಲ್ ಅವರು 47 ಎಸೆತಗಳಲ್ಲಿ 98 ರನ್ ಬಾರಿಸಿ ಅಜೇಯರಾಗಿ ಉಳಿದರು. ಕೇವಲ 2 ರನ್ ಅಂತರದಿಂದ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಜೈಸ್ವಾಲ್ ಬ್ಯಾಟಿಂಗ್ ಕಂಡ ವಿರಾಟ್ ಕೊಹ್ಲಿ ಅವರು ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ IPL 2023: ದುರ್ವರ್ತನೆ ತೋರಿದ ಬಟ್ಲರ್ಗೆ ದಂಡ ವಿಧಿಸಿದ ಬಿಸಿಸಿಐ
“ವಾವ್ಹ್.! ಎಂಹತ ಆಟಗಾರ. ನಾನು ನೋಡಿದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಇದಾಗಿದೆ. ಎಂಥಾ ಅದ್ಭುತ ಪ್ರತಿಭೆ” ಎಂದು ವಿರಾಟ್ ಕೊಹ್ಲಿ ಗುಣಗಾಣ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಪ್ರದರ್ಶನವನ್ನು ಶ್ಲಾಘಿಸಿದರು. “ವಿಶೇಷ ಬ್ಯಾಟಿಂಗ್, ವಿಶೇಷ ಆಟಗಾರ” ಎಂದು ಸೂರ್ಯ ಟ್ವೀಟ್ ಮಾಡಿದ್ದಾರೆ. ಹೀಗೆ ಹಲವು ಆಟಗಾರರು ಜೈಸ್ವಾಲ್ ಆಟವನ್ನು ಹೊಗಳಿದ್ದಾರೆ.
ಪಂದ್ಯ ಗೆದ್ದ ರಾಜಸ್ಥಾನ್
ಕೋಲ್ಕೊತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭಿಕ ಆಘಾತದ ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 149 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ಒಂದು ವಿಕೆಟ್ ಕಳೆದುಕೊಂಡು ಕೇವಲ 13.1 ಓವರ್ನಲ್ಲಿ 151 ರನ್ ಬಾರಿಸಿ ಗೆಲುವು ದಾಖಲಿಸಿತು.