ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಜೆಂಜರ್ಸ್ ಬೆಂಗಳೂರು ತಂಡ 23 ರನ್ಗಳ ಗೆಲುವು ಸಾಧಿಸಿತು. ಇದೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದ ವಿರಾಟ್ ಕೊಹ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಜವಾಬಿತ್ತ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಲಷ್ಟೇ ಶಕ್ತವಾಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಪರ ಭರ್ಜರಿಯಾಗಿ ಬ್ಯಾಟಿಂಗ್ ನಡೆಸಿ ಅರ್ಧಶತಕ ದಾಖಲಿಸಿದರು. ಇದೇ ವೇಳೆ ಅವರು ಆರ್ಸಿಬಿ ಪರ ಬೆಂಗಳೂರಿನ ತವರು ಮೈದಾನದಲ್ಲಿ 2500 ಐಪಿಎಲ್ ರನ್‌ಗಳನ್ನು ಪೂರೈಸಿದ ನೂತನ ಮೈಲುಗಲ್ಲನ್ನು ತಲುಪಿದರು. ಇದು ಐಪಿಎಲ್‌ನಲ್ಲಿ ಒಂದೇ ಸ್ಥಳದಲ್ಲಿ ಒಂದೇ ತಂಡದ ಪರ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ಮೊತ್ತವಾಗಿದೆ. ಈ ಪಂದ್ಯದಲ್ಲಿ 34 ಎಸೆತ ಎದುರಿಸಿದ ಅವರು 50 ರನ್ ಗಳಿಸಿದರು. ಇದು ಈ ಆವೃತ್ತಿಯ ಐಪಿಎಲ್‌ನಲ್ಲಿ ಅವರು ಗಳಿಸಿದ ಮೂರನೇ ಅರ್ಧ ಶತಕವಾಗಿದೆ. ಈ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು.
ಇದನ್ನೂ ಓದಿ IPL 2023: ಆರ್ಸಿಬಿ, ಪಂಜಾಬ್ಗೆ ಗೆಲುವು; ಐಪಿಎಲ್ ಅಂಕಪಟ್ಟಿ ಹೇಗಿದೆ?
2008 ರಲ್ಲಿ ಆರ್ಸಿಬಿ ತಂಡದ ತಂಡಕ್ಕೆ ಸೇರಿದ ಕೊಹ್ಲಿ ಇದುವರೆಗೆ ಆರ್ಸಿಬಿ ಪರವೇ ಆಡುತ್ತಿದ್ದಾರೆ. ಸದ್ಯ ಅವರು 227 ಪಂದ್ಯಗಳನ್ನು ಆಡಿದ್ದು 6838 ರನ್ ಗಳಿಸಿದ್ದಾರೆ. ಇದರಲ್ಲಿ 47 ಅರ್ಧಶತಕ ಮತ್ತು 5 ಶತಕಗಳನ್ನು ಬಾರಿಸಿದ್ದಾರೆ.
ಡೆಲ್ಲಿಗೆ ಸತತ ಸೋಲು
ಈ ಪಂದ್ಯದಲ್ಲಿ ಸೋಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಡಿದ 5 ಪಂದ್ಯಗಳಲ್ಲಿಯೂ ಸೋಲು ಕಂಡಂತಾಗಿದೆ. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿಗೆ ಕನ್ನಡಿಗ ವೈಶಾಖ್ ವಿಜಯ್ಕುಮಾರ್ ಅವರು ಘಾತಕ ಸ್ಫೆಲ್ ನಡೆಸಿ ಸೋಲಿನ ಆಘಾತವಿಕ್ಕಿದರು. ಕೇವಲ 20 ರನ್ ಬಿಟ್ಟು ಕೊಟ್ಟು ಮೂರು ವಿಕೆಟ್ ಕಿತ್ತರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಜತೆಗೆ ತಮ್ಮ ಚೊಚ್ಚಲ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಅಂತಿಮವಾಗಿ ಡೆಲ್ಲಿ 23 ರನ್ ಅಂತರದ ಸೋಲು ಕಂಡಿತು.