Site icon Vistara News

IPL 2023: ಐಪಿಎಲ್​ನಲ್ಲಿ ನೂತನ ದಾಖಲೆ ಬರೆದ ವಿರಾಟ್​ ಕೊಹ್ಲಿ

virat kohli record

ನವದೆಹಲಿ: ಶನಿವಾರ ರಾತ್ರಿ ನಡೆದ ಐಪಿಎಲ್(IPL 2023)​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ 7 ವಿಕೆಟ್​ಗಳ ಸೋಲು ಕಂಡಿದೆ. ಸೋಲಿನ ಮಧ್ಯೆಯೂ ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ನೂತನ ಮೈಲುಗಲ್ಲೊಂದನ್ನು ನಿರ್ಮಿಸಿದ್ದಾರೆ.

ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 50ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಫಿಲಿಪ್ ಸಾಲ್ಟ್ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ 16.4 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ 7 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ಪರ ವಿರಾಟ್​ ಕೊಹ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಅವರ ಈ ಇನಿಂಗ್ಸ್​ ವೇಳೆ ನೂತನ ದಾಖಲೆಯೊಂದು ಹೊರಹೊಮ್ಮಿದೆ. ಐಪಿಎಲ್​ ಕ್ರಿಕೆಟ್​ ಇತಿಹಾಸದಲ್ಲಿ 7 ಸಾವಿರ ರನ್​ ಪೂರ್ತಿಗೊಳಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಕೊಹ್ಲಿ ಪಾತ್ರರಾದರು. ಐಪಿಎಲ್ ವೃತ್ತಿಜೀವನದ 233ನೇ ಪಂದ್ಯವನ್ನಾಡಿದ ಕೊಹ್ಲಿ ಅವರು ತವರಿನ ಮೈದಾನದಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಿಸಿದ್ದು ವಿಶೇಷ.

ಐಪಿಎಲ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್‌ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಧವನ್ 213 ಐಪಿಎಲ್ ಪಂದ್ಯಗಳನ್ನಾಡಿ 6,536 ರನ್‌ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಕಾಣಿಸಿಕೊಂಡಿದ್ದಾರೆ. ಅವರು 6189 ರನ್ ಗಳಿಸಿದ್ದಾರೆ.

ಇದನ್ನೂ ಓದಿ IPL 2023: ವೈಮನಸ್ಸು ಮರೆತು ಬೆನ್ನು ತಟ್ಟಿ ಅಭಿನಂದಿಸಿದ ವಿರಾಟ್ ಕೊಹ್ಲಿ-ಸೌರವ್​ ಗಂಗೂಲಿ

ಅರ್ಧಶತಕದಲ್ಲೂ ದಾಖಲೆ ಬರೆದ ಕೊಹ್ಲಿ

ಡೆಲ್ಲಿ ವಿರುದ್ಧ ಅರ್ಧಶತಕ ಬಾರಿಸುತ್ತಿದಂತೆ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಇದು ಕೊಹ್ಲಿ ಅವರು ಐಪಿಎಲ್​ನಲ್ಲಿ ದಾಖಲಿಸಿದ 50ನೇ ಅರ್ಧಶತಕವೆನಿಸಿತು. ಈ ಸಾಧನೆ ಮಾಡಿದ ಕೇವಲ 2ನೇ ಬ್ಯಾಟರ್‌ ಎನ್ನುವ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ವಾರ್ನರ್‌ 59 ಅರ್ಧಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಧವನ್‌ 49ನೇ ಅರ್ಧಶತಕ ಬಾರಿಸಿ 3ನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಡೆಲ್ಲಿ ವಿರುದ್ಧ 46 ಎಸೆತ ಎದುರಿಸಿ 5 ಬೌಂಡರಿ ನೆರವಿನಿಂದ 55 ರನ್​ ಬಾರಿಸಿದ್ದರು.

Exit mobile version