Site icon Vistara News

IPL 2023: ತಂಡವನ್ನು ಸೋಲಿಸಿದರೂ ಎದುರಾಳಿ ತಂಡದ ಆಟಗಾರನಿಗೆ ಜೆರ್ಸಿ ನೀಡಿ ಗೌರವಿಸಿದ ವಿರಾಟ್​ ಕೊಹ್ಲಿ

virat kohli and rashid khan

#image_title

ಬೆಂಗಳೂರು: ಆರ್​ಸಿಬಿಯ ಪ್ಲೇ ಆಫ್​ ಕನಸಿಗೆ ಗುಜರಾತ್​ ತಂಡ ಕೊಳ್ಳಿ ಇಟ್ಟರೂ ತನ್ನ ಎದುರಾಳಿ ತಂಡ ಆಟಗಾರ ರಶೀದ್​ ಖಾನ್​ ಅವರಿಗೆ ವಿರಾಟ್​ ಕೊಹ್ಲಿ ತಮ್ಮ ಜೆರ್ಸಿಯನ್ನು ನೀಡಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಕೊಹ್ಲಿಯ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆರ್​ಸಿಬಿ ವಿರಾಟ್​ ಕೊಹ್ಲಿಯ ಅಜೇಯ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 197 ರನ್​ ಬಾರಿಸಿತು. ಗುರಿ ಬೆನ್ನಟಿದ ಗುಜರಾತ್​ 19.1 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 198 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಆರ್​ಸಿಯ ಈ ಸೋಲಿನಿಂದ ಮುಂಬೈ ತಂಡ ಪ್ಲೇ ಆಫ್​ ಪ್ರವೇಶಿಸಿತು.

ಬೃಹತ್​ ಮೊತ್ತವನ್ನು ದಿಟ್ಟ ರೀತಿಯಿಂದ ಬೆನ್ನಟ್ಟಿದ ಗುಜರಾತ್​ ತಂಡ ಯಾವುದೇ ಆತಂಕವಿಲ್ಲದೆ ಬ್ಯಾಟಿಂಗ್​ ನಡೆಸಿತು. ಶುಭಮನ್​ ಗಿಲ್​ ಮತ್ತು ದ್ವಿತೀಯ ವಿಕೆಟ್​ಗೆ ಜತೆಯಾದ ವಿಜಯ್​ ಶಂಕರ್​ ಸೇರಿಕೊಂಡು ಆರ್​ಸಿಬಿಯ ಗೆಲುವಿಗೆ ಕೊಳ್ಳಿ ಇಟ್ಟರು. ಶುಭಮನ್​ ಗಿಲ್​ ಅಜೇಯ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಪಂದ್ಯ ಸೋತರೂ ವಿರಾಟ್​ ಕೊಹ್ಲಿ ಅವರು ರಶೀದ್​ ಖಾನ್​ ಅವರಿಗೆ ತಮ್ಮ ಜೆರ್ಸಿ ಮೇಲೆ ಸಹಿ ಹಾಕಿ ಸ್ಮರಣೀಯ ಉಡುಗೊರೆಯೊಂದನ್ನು ನೀಡಿದರು. ಈ ವಿಡಿಯೊವನ್ನು ಐಪಿಎಲ್​ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು “ಅದ್ಭುತ ಕ್ಷಣ” ಎಂದು ಬರೆದುಕೊಂಡಿದೆ. ರಶೀದ್​ ಖಾನ್​ ಮತ್ತು ವಿರಾಟ್​ ಕೊಹ್ಲಿ ಉತ್ತಮ ಸ್ನೇಹಿತರೂ ಕೂಡ ಆಗಿದ್ದಾರೆ.

ಇದನ್ನೂ ಓದಿ IPL 2023: ಆರ್​ಸಿಬಿ ತೊರೆಯುವ ಕಾಲ ಬಂದಿದೆ; ಕೊಹ್ಲಿಗೆ ಸಲಹೆ ನೀಡಿದ ಪೀಟರ್ಸನ್​

ಶತಕ ಬಾರಿಸಿ ದಾಖಲೆ ಬರೆದ ಕೊಹ್ಲಿ

ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಕೊಹ್ಲಿ ಅವರು ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದರು. ಐಪಿಎಲ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಕ್ರಿಸ್​ ಗೇಲ್​ ಅವರ ಜತೆ ಜಂಟಿ ದಾಖಲೆ ಬರೆದಿದ್ದರು. ಇದೀಗ 7 ಶತಕದೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. 60 ಎಸೆತಗಳಲ್ಲಿ ಶತಕ ಪೂರೈಸಿದ ಕೊಹ್ಲಿ ಅಂತಿಮವಾಗಿ 13 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ ಅಜೇಯ 101 ರನ್​ ಬಾರಿಸಿದ್ದರು.

Exit mobile version