ಬೆಂಗಳೂರು: ಕಳದೆ ಭಾನುವಾರ ಗುಜರಾತ್ ವಿರುದ್ಧ ಸೋಲು ಕಾಣುವ ಮೂಲಕ ಆರ್ಸಿಬಿ ತಂಡ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ನಿರ್ಗಮಿಸಿದೆ. ಸತತ ಮೂರು ಬಾರಿ ಪ್ಲೇ ಆಫ್ ತಲುಪಿದ್ದ ಆರ್ಸಿಬಿ ಈ ಬಾರಿ ಲೀಗ್ ಹಂತದಲ್ಲೇ ಸೋತು ನಿರಾಸೆ ಮೂಡಿಸಿತು. ಅದರಲ್ಲೂ ತವರಿನಂಗಳದಲ್ಲಿ ಆರ್ಸಿಬಿ ಸೋಲು ಕಂಡಿರುವುದು ತಂಡದ ಆಟಗಾರ ಜತೆಗೆ ಅಭಿಮಾನಿಗಳಿಗೂ ತೀವ್ರ ನೋವು ತಂದಿದೆ. ಇದೇ ವಿಚಾರವಾಗಿ ವಿರಾಟ್ ಕೊಹ್ಲಿ ಅವರು ಭಾವನಾತ್ಮಕ ಟ್ವೀಟ್ ಒಂದನ್ನು ಮಾಡಿದ್ದಾರೆ.
ಭಾರಿ ಸಂಖ್ಯೆಯ ಅಭಿಮಾನಿಗಳು ಸೇರಿಕೊಂಡಿದ್ದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಬಾರಿಯ ಐಪಿಎಲ್ನ ಅಂತಿಮ ಲೀಗ್ ಪಂದ್ಯದಲ್ಲಿ ಗುಜರಾತ್ ಮತ್ತು ಆರ್ಸಿಬಿ ಮುಖಾಮುಖಿಯಾಗಿತ್ತು. ಮಳೆಯಿಂದ ವಿಳಂಬವಾದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 5 ವಿಕೆಟ್ಗೆ 197 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ಶುಭಮನ್ ಗಿಲ್ ಅವರ ಅಜೇಯ ಶತಕದ ನೆರವಿನಿಂದ ಅಮೋಘ ಗೆಲುವು ತನ್ನದಾಗಿಸಿಕೊಂಡಿತು.
ಆರ್ಸಿಬಿ ಸೋಲು ಕಂಡ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಸ್ತಬ್ಧಗೊಂಡಿತು. ಅಭಿಮಾನಿಗಳು ಬೇಸರದಿಂದ ಮನೆ ಕಡೆ ಮುಖಮಾಡಿದರು. ಸ್ವತಃ ಸೋಲಿನಿಂದ ವಿರಾಟ್ ಕೊಹ್ಲಿ ಮತ್ತು ಸಿರಾಜ್ ಕಣ್ಣೀರು ಸುರಿಸಿದರು. ಇದೀಗ ತಂಡದ ಸೋಲಿನ ಬಳಿಕ ವಿರಾಟ್ ಕೊಹ್ಲಿ ಅವರು ಭಾವನಾತ್ಮಕ ಸಂದೇಶವೊಂದನ್ನು ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದಾರೆ.
“ಈ ಬಾರಿಯ ಆವೃತ್ತಿ ಉತ್ತಮವಾಗಿತ್ತು. ಆದರೆ ನಾವು ಅಂತಿಮ ಹಂತದಲ್ಲಿ ಎಡವಿದೆವು. ತಂಡ ಸೋಲು ಕಂಡಿರುವುದಕ್ಕೆ ತೀವ್ರ ನೋವು ಮತ್ತು ಬೇಸರವಿದೆ. ಆದರೂ ನಮ್ಮ ತಂಡಕ್ಕೆ ಬೆಂಬಲಿಸಿದ ನಿಷ್ಠಾವಂತ ಅಭಿಮಾನಿಗಳ ಬೆಂಬಲಕ್ಕೆ ಸೋಲು ಕಂಡರೂ ನಾವು ಹೆಮ್ಮೆಯಿಂದ ತಲೆ ಎತ್ತಿ ನಡೆಯುತ್ತೇವೆ” ಎಂದು ಹೇಳುವ ಮೂಲಕ ಕೊಹ್ಲಿ ಕೃತಜ್ಞತೆ ತಿಳಿಸಿದ್ದಾರೆ.
ಇದನ್ನೂ ಓದಿ IPL 2023 : ಈ ಸಲ ಕಪ್ ನಹಿ ಎಂದಿದ್ದ ಪ್ಲೆಸಿಸ್, ಹಳೆ ವಿಡಿಯೊ ವೈರಲ್!
ಇದೇ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಐಪಿಎಲ್ ಕ್ರಿಕೆಟ್ನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದರು. ಐಪಿಎಲ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು. ಈ ಮೂಲಕ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದರು. ಸದ್ಯ ವಿರಾಟ್ 7 ಶತಕ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ಗೇಲ್ 6 ಶತಕ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ರಾಜಸ್ಥಾನ್ ತಂಡದ ಜಾಸ್ ಬಟ್ಲರ್ ಕಾಣಿಸಿಕೊಂಡಿದ್ದಾರೆ ಅವರು 5 ಶತಕ ಬಾರಿಸಿದ್ದಾರೆ.