ಬೆಂಗಳೂರು: ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ನಡುವಿನ ಶಿತಲ ಸಮರ ಮುಗಿದಂತೆ ಕಾಣುತ್ತಿಲ್ಲ. ಕಳೆದ ವಾರ ನಡೆದ ಡೆಲ್ಲಿ ಮತ್ತು ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಉಭಯ ಆಟಗಾರರ ಮಧ್ಯೆ ನಡೆದ ಮುಸುಕಿನ ಗುದ್ದಾಟವೊಂದು ಭಾರಿ ಸುದ್ದಿಯಾಗುತ್ತು. ಇದೀಗ ಮುಂದುವರಿದ ಭಾಗವೆಂಬಂತೆ ವಿರಾಟ್ ಕೊಹ್ಲಿ ಅವರು ಸೌರವ್ ಗಂಗೂಲಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ನಡುವಿನ ಶೀತಲ ಸಮರ ಜಗಜ್ಜಾಹೀರವಾಗಿತ್ತು. ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಅವರು ಡಗೌಟ್ನಲ್ಲಿ ಕುಳಿತಿದ್ದ ಸೌರವ್ ಗಂಗೂಲಿಯನ್ನು ದಿಟ್ಟಿಸಿ ನೋಡಿದ್ದ ಫೋಟೊ, ಆ ಬಳಿಕ ಆಟಗಾರರು ಸೇರಿದಂತೆ ತಂಡದ ಸಿಬ್ಬಂದಿಗಳು ಪರಸ್ಪರ ಹಸ್ತಲಾಘವ ಮಾಡಿದರೂ ಕೊಹ್ಲಿ ಮತ್ತು ಗಂಗೂಲಿ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ ವಿಡಿಯೊ ಎಲ್ಲೆಡೆ ಹರಿದಾಟಿತ್ತು. ಇದು ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿತ್ತು.
ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಮತ್ತೊಂದು ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಬರಲು ಪ್ಯಾಡ್ ಕಟ್ಟಿ ರೆಡಿಯಾಗಿ ಕುಳಿತ್ತಿದ್ದರು. ಇದೇ ವೇಳೆ ಅಲ್ಲಿಯೇ ನಡೆಕೊಂಡು ಹೋದ ಗಂಗೂಲಿ ಅವರು ವಿರಾಟ್ ಅವರನ್ನು ಕಂಡರೂ ಕಾಣದ ರೀತಿಯಲ್ಲಿ ನೀರು ಕುಡಿದುಕೊಂಡು ಮುಂದೆ ಹೋಗುತ್ತಾರೆ. ಈ ವೇಳೆ ಕೊಹ್ಲಿ ಗಂಗೂಲಿಯನ್ನು ದಿಟ್ಟಿಸಿ ನೋಡಿದ್ದಾರೆ. ಆದರೆ ಇದೀಗ ವಿರಾಟ್ ಕೊಹ್ಲಿ ಸೌರವ್ ಗಂಗೂಲಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ Chetan Sharma: ಗಂಗೂಲಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದು ಸುಳ್ಳು; ಚೇತನ್ ಶರ್ಮಾ
ಇವರಿಬ್ಬರ ಮಧ್ಯೆ ಮುನಿಸಿಗೆ ಕಾರಣವೇನು?
2021 ರಲ್ಲಿ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ನಾಯಕತ್ವದಿಂದ ವಜಾಗೊಳಿ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ನೀಡಲಾಗಿತ್ತು. ಈ ವೇಳೆ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿದ್ದರು. ಕೊಹ್ಲಿ ಏಕದಿನ ತಂಡದ ನಾಯಕತ್ವದ ಪದಚ್ಯುತಿಗೆ ಗಂಗೂಲಿಯೇ ಮೂಲ ಕಾರಣ ಎನ್ನಲಾಗಿತ್ತು. ಇದೇ ವಿಚಾರವಾಗಿ ಕೊಹ್ಲಿ ಅವರು ತಮ್ಮನ್ನು ನಾಯಕತ್ವದಿಂದ ಕೆಳಗಿಳಿಸುವ ವಿಚಾರವನ್ನು ಬಿಸಿಸಿಐ ಅಧ್ಯಕ್ಷರು ನನಗೆ ಹೇಳಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಆದರೆ ಈ ಆರೋಪವನ್ನು ಗಂಗೂಲಿ ತಳ್ಳಿಹಾಕಿದ್ದರು. ಹೀಗಾಗಿ ಅಂದಿನಿಂದ ಈ ದಿಗ್ಗಜರ ನಡುವಿನ ಸಮರ ಮುಂದುವರಿದಿದೆ. ಸದ್ಯ ಇವರಿಬ್ಬರ ಶಿತಲ ಸಮರ ಯಾವಾಗ ಕೊನೆಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.