ಬೆಂಗಳೂರು: ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧದ ಭಾನುವಾರದ ಐಪಿಎಲ್ನ ಡಬಲ್ ಹೆಡರ್ ದ್ವಿತೀಯ ಪಂದ್ಯದಲ್ಲಿ, ಕನ್ನಡಿಗರ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಭರ್ಜರಿ 8 ವಿಕೆಟ್ಗಳ ಗೆಲುವು ದಾಖಲಿಸಿ ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಮಿಂಚಿದ ವಿರಾಟ್ ಕೊಹ್ಲಿ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ತಿಲಕ್ ವರ್ಮ ಅವರ ಏಕಾಂಗಿ ಹೋರಾಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿತು. ದೊಡ್ಡ ಮೊತ್ತವನ್ನು ಲೀಲಾಜಾಲವಾಗಿ ಬೆನ್ನಟ್ಟಿದ ಆರ್ಸಿಬಿ 16.2 ಓವರ್ಗಳಲ್ಲಿ 2 ವಿಕೆಟ್ನಷ್ಟಕ್ಕೆ 172 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ವೇಳೆ ಅಬ್ಬರದ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸುವ ಮೂಲಕ ಐಪಿಎಲ್ನಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದರು. ಐಪಿಎಲ್ನಲ್ಲಿ 50ನೇ 50 ಪ್ಲಸ್ ಸ್ಕೋರ್ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗರಾದರು. ಡೇವಿಡ್ ವಾರ್ನರ್ ಅವರು ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅವರು 60 ಬಾರಿ 50 ಪ್ಲಸ್ ಸ್ಕೋರ್ ಮಾಡಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ 49 ಬಾರಿ ಈ ಸಾಧನೆ ಮಾಡಿ ಮೂರನೇ ಸ್ಥಾನದಲ್ಲಿದ್ದಾರೆ. ಸದ್ಯ ಕೊಹ್ಲಿ ಐಪಿಎಲ್ನಲ್ಲಿ 45 ಅರ್ಧಶತಕ ಮತ್ತು 5 ಶತಕಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ IPL 2023: ಕೊಹ್ಲಿ, ಡುಪ್ಲೆಸಿಸ್ ಅಬ್ಬರ; ಮುಂಬೈ ವಿರುದ್ಧ ಭರ್ಜರಿ 8 ವಿಕೆಟ್ ಗೆಲುವು ಸಾಧಿಸಿದ ಆರ್ಸಿಬಿ
ಬೊಂಬಾಟ್ ಜತೆಯಾಟ ನಡೆಸಿದ ಕೊಹ್ಲಿ-ಡು ಪ್ಲೆಸಿಸ್
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ನಾಯಕ ಫಾಪ್ ಡು ಪ್ಲೆಸಿಸ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಮುಂಬೈ ಬೌಲರ್ಗಳನ್ನು ಬೆಂಡೆತ್ತಿದ್ದರು. ಜೋಫ್ರಾ ಆರ್ಚರ್ ಅವರ ಮೊದಲ ಓವರ್ನ ಮೊದಲ ಎಸೆತಕ್ಕೆ ಜೀವದಾನ ಪಡೆದ ಕೊಹ್ಲಿ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ಅರ್ಧಶತಕ ಬಾರಿಸಿದರು. ಇವರ ಜತೆಗೆ ಡು ಪ್ಲೆಸಿಸ್ ಕೂಡ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಅವರೂ ಕೂಡ ಅರ್ಧಶತಕ ಪೂರ್ತಿಗೊಳಿಸಿದರು. ಉಭಯ ಆಟಗಾರರು ಮೈದಾನದ ಅಷ್ಟ ದಿಕ್ಕುಗಳಿಗು ಚೆಂಡನ್ನು ಬಾರಿಸಿ ತಮ್ಮ ಬ್ಯಾಟಿಂಗ್ ಪ್ರತಾಪವನ್ನು ತೋರ್ಪಡಿಸಿದರು.
ಡು ಪ್ಲೆಸಿಸ್ 73 ರನ್ ಗಳಿಸಿದ ವೇಳೆ ಅರ್ಶದ್ ಖಾನ್ಗೆ ವಿಕೆಟ್ ಒಪ್ಪಿದರು. ಒಟ್ಟು 43 ಎಸೆತ ಎದುರಿಸಿದ ಅವರು ಈ ಇನಿಂಗ್ಸ್ ವೇಳೆ 6 ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿದರು. ಕೊಹ್ಲಿ ಮತ್ತು ಡು ಪ್ಲೆಸಿಸ್ ಮೊದಲ ವಿಕೆಟ್ಗೆ 148 ರನ್ ರಾಶಿ ಹಾಕಿತು. ಈ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದ ದಿನೇಶ್ ಕಾರ್ತಿಕ್ ಖಾತೆ ತರೆಯುವ ಮುನ್ನವೇ ವಿಕೆಟ್ ಕೈ ಚೆಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್ ಕಡೆಗೆ ನಡೆದರು. ಆದರೆ ಆ ಬಳಿಕ ಬಂದ ಮ್ಯಾಕ್ಸ್ವೆಲ್ ಸತತ ಸಿಕ್ಸರ್ ಬಾರಿಸಿ ತಂಡಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಗೆಲುವಿಗೆ ಆರು ರನ್ ಅಗತ್ಯವಿದ್ದಾಗ ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸಿ ತಂಡದ ಗೆಲುವನ್ನು ಸಾರಿದರು. ಕೊಹ್ಲಿ 49 ಎಸೆತ ಎದುರಿಸಿ ಅಜೇಯ 82 ರನ್ ಬಾರಿಸಿದರು. ಈ ಮನಮೋಹಕ ಇನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡಿತು. ಮ್ಯಾಕ್ಸ್ ವೆಲ್ ಅಜೇಯ 12 ರನ್ ಗಳಿಸಿದರು. ಮುಂಬೈ ಪರ ಆರ್ಶದ್ ಖಾನ್ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದು ವಿಕೆಟ್ ಪಡೆದರು.