ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ತವರು ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ಕೊನೆಯ ಲೀಗ್ ಪಂದ್ಯವಾಡಿದೆ. ತವರಿನ ಕೊನೆಯ ಲೀಗ್ ಪಂದ್ಯವಾದ ಕಾರಣ ಚೆನ್ನೈ ತಂಡದ ಆಟಗಾರರು ಅಭಿಮಾನಿಗಳಿಗೆ ಧನ್ಯವಾದ ಹೇಳಲು ಸ್ಟೇಡಿಯಂನತ್ತ ಸುತ್ತ ತಿರುಗಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಸಿಎಸ್ಕೆ ನಾಯಕ ಧೋನಿ ಬಳಿ ಓಡಿ ಬಂದು ಅವರ ಶರ್ಟ್ನಲ್ಲಿ ಧೋನಿ ಆಟೋಗ್ರಾಫ್ ತೆಗೆದುಕೊಂಡರು. ಆಟೋಗ್ರಾಫ್ ಪಡೆದ ಬಳಿಕ ಗವಾಸ್ಕರ್ ಅವರು ಆಡಿದ ಭಾವನಾತ್ಮಕ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಿಕೆಟ್ ಸಂದರ್ಶನದಲ್ಲಿ ಗವಾಸ್ಕರ್ಗೆ ಧೋನಿ ಬಳಿ ಆಟೋಗ್ರಾಫ್ ಪಡೆದ ಬಗ್ಗೆ ಪ್ರಶ್ನೆಯೊಂದನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ”ಧೋನಿಯನ್ನು ಪ್ರೀತಿ ಮಾಡದಿರುವವರು ಯಾರಿದ್ದಾರೆ ಹೇಳಿ?. ಅನೇಕ ವರ್ಷಗಳಿಂದ ಧೋನಿ ಭಾರತೀಯ ಕ್ರಿಕೆಟ್ಗೆ ನೀಡಿರುವ ಕೊಡುಗೆ ಅದ್ಭುತ. ಇವರಿಗಿಂತ ಉತ್ತಮ ರೋಲ್ ಮಾಡೆಲ್ ಇನ್ನೊಬ್ಬರು ಬೇಕೇ?. ಧೋನಿ ನನಗಿಂತ ವಯಸ್ಸಿನಲ್ಲಿ ಕಿರಿಯನಾದರೂ, ಅವರ ಸಾಧನೆ ಮಾತ್ರ ತನ್ನ ವಯಸ್ಸಿಗಿಂತ ದೊಡ್ಡದಾಗಿದೆ. ಅಂದು 1983ರಲ್ಲಿ ಕಪಿಲ್ದೇವ್ ಅವರು ವಿಶ್ವ ಕಪ್ ಎತ್ತಿ ಹಿಡಿದದ್ದು ಮತ್ತು 2011ರಲ್ಲಿ ಧೋನಿ ಸಿಕ್ಸರ್ ಬಾರಿಸಿ ಭಾರತಕ್ಕೆ ದ್ವಿತೀಯ ವಿಶ್ವ ಕಪ್ ಗೆಲ್ಲಿಸಿಕೊಟ್ಟಿದ್ದು ನನ ಜೀವನದ ಮರೆಯಲಾಗದ ಕ್ಷಣ. ನನ್ನ ಜೀವನದಲ್ಲಿ ಇನ್ನು ಯಾವುದೇ ಬಯಕೆಗಳಿಲ್ಲ. ನಾನು ಸಂತೋಷದಿಂದಲೇ ಸಾಯಬಹುದಾಗಿದೆ” ಎಂದು ಗವಾಸ್ಕರ್ ಭಾವನಾತ್ಮಕ ಮಾತುಗಳನ್ನಾಡಿದರು. ಧೋನಿ ಅವರ ಆಟೋಗ್ರಾಫ್ ಪಡೆದಿದ್ದು ನನ್ನ ಭಾಗ್ಯ. ಇದನ್ನು ನಾನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ” ಎಂದು ಹೇಳಿದರು.
ಇದನ್ನೂ ಓದಿ IPL 2023: ಪ್ಲೇ ಆಫ್ ಪ್ರವೇಶಿಸಿದ ಗುಜರಾತ್; ಉಳಿದ ತಂಡಗಳ ಭವಿಷ್ಯವೇನು?; ಸಂಪೂರ್ಣ ಮಾಹಿತಿ ಇಲ್ಲಿದೆ
ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಸೀಸನ್ ಎಂದು ಹೇಳಲಾಗುತ್ತಿದೆ. ಈ ಸೀಸನ್ ಬಳಿಕ ಧೋನಿ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ ಎಂದು ಟೂರ್ನಿ ಆರಂಭಕ್ಕೂ ಮುನ್ನೇ ಹೇಳಲಾಗಿತ್ತು. ಸದ್ಯ ಚೆನ್ನೈ ಆಡಿರುವ 13 ಪಂದ್ಯಗಳಲ್ಲಿ 7 ಗೆಲುವು, 5 ಸೋಲು ಕಂಡು 15 ಅಂಕ ಸಂಪಾದಿಸಿ ದ್ವಿತೀಯ ಸ್ಥಾನದಲ್ಲಿದೆ. ಪ್ಲೇ ಆಫ್ಗೆ ಸನಿಹಕ್ಕೆ ಬಂದು ನಿಂತಿರುವ ಧೋನಿ ಪಡೆ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಒಂದೊಮ್ಮೆ ಸೋತರೆ ಉಳಿದ ತಂಡಗಳ ಫಲಿತಾಂಶದ ಮೇಲೆ ಪ್ಲೇ ಆಫ್ ಭವಿಷ್ಯ ನಿರ್ಧಾರವಾಗಲಿದೆ.