ಅಹಮದಾಬಾದ್: ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಫೈನಲ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉಭಯ ತಂಡಗಳ ಈ ಪ್ರಶಸ್ತಿ ಸಮರಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಸರ್ವ ವಿಧದಲ್ಲೂ ಸಜ್ಜಾಗಿ ನಿಂತಿದೆ. ಈ ಪಂದ್ಯಕ್ಕೆ ಇತ್ತಂಡಗಳ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಮಾಹಿತಿ ಇಂತಿದೆ.
ಸಮಬಲದ ತಂಡಗಳು
ಎರಡೂ ತಂಡಗಳು ಸಮಬಲದಿಂದ ಕೂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿ ಸಂಘಟಿಸುವಲ್ಲಿ ಎರಡೂ ತಂಡಗಳು ಬಲಿಷ್ಠವಾಗಿದೆ. ಗುಜರಾತ್ ಪರ ಶುಭಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯ ಅತ್ಯಂತ ಅಪಾಯಕಾರಿಗಳು. ಚೆನ್ನೈ ಪರ ಋತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೆ, ರಹಾನೆ ಮತ್ತು ಶಿವಂ ದುಬೆ ಕೂಡ ಸಿಡಿಯಬಲ್ಲರು. ಆದರೆ ಮೊಯಿನ್ ಅಲಿ ಈ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಅವರು ಮಹತ್ವದ ಪಂದ್ಯದಲ್ಲಿ ಆಡಬೇಕಾದ ಅನಿವಾರ್ಯತೆ ಇದೆ.
ಮುಖಾಮುಖಿ
ಚೆನ್ನೈ ಮತ್ತು ಗುಜರಾತ್ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 4 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಗುಜರಾತ್ ಮೂರು ಬಾರಿ ಗೆದ್ದಿದೆ. ಚೆನ್ನೈ ತಂಡ ಒಂದು ಪಂದ್ಯ ಗೆದ್ದಿದೆ. ಈ ಗೆಲುವು ಇದೇ ಆವೃತ್ತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದಾಖಲಾಗಿತ್ತು. ಅಹಮದಾಬಾದ್ನಲ್ಲೇ ನಡೆದ ಉದ್ಘಾಟನ ಪಂದ್ಯದಲ್ಲಿ ಚೆನ್ನೈ ವಿರುದ್ಧ ಗುಜರಾತ್ ಗೆದ್ದು ತನ್ನ ಅಭಿಯಾನವನ್ನು ಆರಂಭಿಸಿತ್ತು. ಇದೀಗ ಅಂತಿಮ ಪಂದ್ಯದಲ್ಲಿಯೂ ಇತ್ತಂಡಗಳು ಮುಖಾಮುಖಿಯಾಗಿವೆ. ಇಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಈ ಪಂದ್ಯದ ಕೌತುಕ.
ಸಂಭಾವ್ಯ ತಂಡಗಳು
ಗುಜರಾತ್ ಟೈಟನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ರಶೀದ್ ಖಾನ್, ರಾಹುಲ್ ತೇವಾಟಿಯಾ, ವಿಜಯ್ ಶಂಕರ್/ ಸಾಯಿ ಸುದರ್ಶನ್, ಮೊಹಮ್ಮದ್ ಶಮಿ, ಯಶ್ ದಯಾಳ್, ನೂರ್ ಅಹ್ಮದ್/ ಜೋಶುವಾ ಲಿಟಲ್, ಮೋಹಿತ್ ಶರ್ಮಾ.
ಇದನ್ನೂ ಓದಿ IPL 2023 : ತಮ್ಮ ದೇಹದಲ್ಲಿರುವ ಟ್ಯಾಟೂಗಳ ಅರ್ಥ ವಿವರಿಸಿದ ಸೂರ್ಯಕುಮಾರ್!
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು/ಅಜಿಂಕ್ಯ ರಹಾನೆ, ಮೊಯೀನ್ ಅಲಿ, ಶಿವಂ ದುಬೆ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾಣಾ, ಮಹೀಶ್ ತೀಕ್ಷಣ.