ಮೊಹಾಲಿ: ಐಪಿಎಲ್ನಲ್ಲಿ ಸಾರ್ವಕಾಲಿಕ ಅತ್ಯುತ್ತಮ ಆಟಗಾರ (Greatest Of All Time) ಯಾರೆಂದು ವಿರಾಟ್ ಕೊಹ್ಲಿ ಅವರು ಸೂಚಿಸಿದ್ದಾರೆ. ಅಚ್ಚರಿ ಎಂದರೆ ಕೊಹ್ಲಿ ಸೂಚಿಸಿದ ಆಟಗಾರರ ಪಟ್ಟಿಯಲ್ಲಿ ಎಂ.ಎಸ್ ಧೋನಿ, ರೋಹಿತ್ ಶರ್ಮಾ ಹೆಸರು ಕಾಣಿಸಿಕೊಂಡಿಲ್ಲ. ಕೊಹ್ಲಿ ಪ್ರಕಾರ ಮಾಜಿ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಲಸಿತ್ ಮಾಲಿಂಗ ಅವರು ಐಪಿಎಲ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿದ್ದಾರೆ.
ಜೀಯೊ ಸಿನಿಮಾನ ಸಂದರ್ಶನದಲ್ಲಿ ಮಾತನಾಡುವ ವೇಳೆ ಕೊಹ್ಲಿ ಅವರಿಗೆ ಈ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಕೊಹ್ಲಿ, ಲೀಗ್ನಲ್ಲಿ ಹಲವು ದೊಡ್ಡ ಸಾಧನೆ ಮಾಡಿದ ಆಟಗಾರರು ಇದ್ದಾರೆ. ಇದು ತುಂಬಾ ಕಷ್ಟದ ಕೆಲಸ. ಆದರೂ ನಾನು ಎರಡು ಹೆಸರನ್ನು ಸೂಚಿಸಲು ಇಚ್ಚಿಸುತ್ತೇನೆ ಎಂದು ಹೇಳಿ ಡಿ ವಿಲಿಯರ್ಸ್ ಅವರು ನಾನು ಕಂಡ ಐಪಿಎಲ್ ಕಂಡ ಅತ್ಯುತ್ತಮ ಫಿನಿಶರ್ಗಳಲ್ಲಿ ಒಬ್ಬರು. ಇನ್ನು ಮುಂಬೈ ಇಂಡಿಯನ್ಸ್ನ ಲಸಿತ್ ಮಾಲಿಂಗ ಅವರು ಶ್ರೇಷ್ಠ ಬೌಲರ್ ಎಂದು ಸೂಚಿಸಿದ್ದಾರೆ. ಇದಲ್ಲದೆ ಕೆಲ ಪ್ರಶ್ನೆಗಳಿಗೂ ಅವರು ಉತ್ತರಿಸಿದ್ದಾರೆ.
ಇದನ್ನೂ ಓದಿ IPL 2023: ಆರ್ಸಿಬಿ, ಡೆಲ್ಲಿಗೆ ಗೆಲುವು; ಐಪಿಎಲ್ ಅಂಕಪಟ್ಟಿ ಹೇಗಿದೆ?
600 ಫೋರ್ಗಳ ಮೈಲುಗಲ್ಲು ದಾಟಿದ ಕೊಹ್ಲಿ
ವಿರಾಟ್ ಕೊಹ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕಡಿಮೆ ರನ್ರೇಟ್ನೊಂದಿಗೆ ಆಡಿರುವ ಹೊರತಾಗಿಯೂ 59 ರನ್ ಬಾರಿಸಿ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾಗಿದ್ದರು. ಅವರ ಈ ಇನಿಂಗ್ಸ್ನಲ್ಲಿ 5 ಫೋರ್ಗಳು ಹಾಗೂ ಏಕೈಕ ಸಿಕ್ಸರ್ ದಾಖಲಾಗಿತ್ತು. ಐದು ಪೋರ್ಗಳನ್ನು ಬಾರಿಸುವುದರೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 600 ಫೋರ್ಗಳ ಸಾಧನೆ ಮಾಡಿದರು. ಈ ಮೈಲುಗಲ್ಲು ದಾಟಿದ ಮೂರನೇ ಆಟಗಾರ ಎಂಬ ಖ್ಯಾತಿಯನ್ನು ಪಡೆದುಕೊಂಡರು. ಇದರ ಜತೆಗೆ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ 100 ಬಾರಿ ಮೂವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಆರ್ಸಿಬಿಗೆ ಗೆಲುವು
ತಂಡದ ನಾಯಕ ಫಾಪ್ ಡು ಪ್ಲೆಸಿಸ್ ಅವರ ಅನುಪಸ್ಥಿತಿಯಲ್ಲಿ ತಂಡದವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಆರ್ಸಿಬಿಗೆ 24 ರನಗಳ ಗೆಲುವು ದಾಖಲಿಸಿಕೊಟ್ಟಿದ್ದಾರೆ. ಪಂಜಾಬ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಗುರುವಾರದ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್ಸಿಬಿ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ. ಜವಾಬಿತ್ತ ಪಂಜಾಬ್ ಕಿಂಗ್ಸ್ 18.2 ಓವರ್ಗಳಲ್ಲಿ 150 ರನ್ ಗಳಿಸಿ ಶರಣಾಯಿತು.