ಮುಂಬಯಿ: 16ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನು ಮೂರು ಪಂದ್ಯಗಳು ನಡೆದರೆ ವಿಶ್ವದ ಕ್ಯಾಶ್ ರಿಚ್ ಟೂರ್ನಿಗೆ ಅದ್ಧೂರಿ ತೆರೆ ಬೀಳಲಿದೆ. ಈ ಆವೃತ್ತಿಯಲ್ಲಿ ಹಲವು ದಾಖಲೆಗಳು ನಿರ್ಣಾಣವಾಗಿದೆ. ಸದ್ಯ ಐಪಿಎಲ್ ಇತಿಹಾಸದಲ್ಲಿ ಒಂದೇ ಸೀಸನ್ನಲ್ಲಿ ಸತತ ಎರಡು ಶತಕ ಬಾರಿಸಿದ ಆಟಗಾರರ ಮಾಹಿತಿ ಇಂತಿದೆ.
ಶಿಖರ್ ಧವನ್: ಟೀಮ್ ಇಂಡಿಯಾದ ಅನುಭವಿ ಆಟಗಾರ ಶಿಖರ್ ಧವನ್ ಅವರು ಐಪಿಎಲ್ನಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸಿ ಮೊದಲ ಆಟಗಾರನಾಗಿದ್ದಾರೆ. ಅವರು 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದರು.
ಜಾಸ್ ಬಟ್ಲರ್: ಧವನ್ ಬಳಿಕ ಈ ಸಾಧನೆ ಮಾಡಿದ ಆಟಗಾರನೆಂದರೆ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್. 2022ರ ಟೂರ್ನಿಯಲ್ಲಿ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸತತ ಎರಡು ಶತಕ ಸಿಡಿಸಿದ್ದರು.
ವಿರಾಟ್ ಕೊಹ್ಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ಆರ್ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಈ ಆವೃತ್ತಿಯ ಐಪಿಎಲ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಇದರಲ್ಲಿ ಒಂದು ಅವರ ಶತತ ಎರಡು ಶತಕವೂ ಒಳಗೊಂಡಿದೆ. ಪ್ರಸಕ್ತ ಋತುವಿನಲ್ಲೇ ಕೊಹ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮತ್ತು ಇದಾದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಎರಡನೇ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿಯೂ ಶತಕ ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡರು.
ಇದನ್ನೂ ಓದಿ IPL 2023: 10ನೇ ಬಾರಿ ಫೈನಲ್ ಪ್ರವೇಶಿಸಿದ ಚೆನ್ನೈ; ತಂಡ ನಡೆದು ಬಂದ ಹಾದಿ ಹೇಗಿದೆ?
ಶುಭಮನ್ ಗಿಲ್: ಟೀಮ್ ಇಂಡಿಯಾದ ಬರವಸೆಯ ಆಟಗಾರ, ಭವಿಷ್ಯದ ವಿರಾಟ್ ಕೊಹ್ಲಿ ಎಂದು ಖ್ಯಾತಿ ಪಡೆದಿರುವ ಗುಜರಾತ್ ತಂಡದ ಶುಭಮನ್ ಗಿಲ್ ಕೂಡ ಪ್ರಸಕ್ತ ಆವೃತ್ತಿಯ ಐಪಿಎಲ್ನಲ್ಲಿ ಎರಡು ಶತಕ ಬಾರಿಸಿದ್ದಾರೆ. 23 ವರ್ಷದ ಗಿಲ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದರೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಎರಡನೇ ಶತಕ ಬಾರಿಸಿದರು. ಅಚ್ಚರಿ ಎಂದರೆ ವಿರಾಟ್ ಕೊಹ್ಲಿಯೂ ಇದೇ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದರು.