ಚೆನ್ನೈ: ವಿಶ್ವದ ಕ್ಯಾಶ್ ರಿಚ್ ಕ್ರಿಕೆಟ್ ಲೀಗ್ 16ನೇ ಆವೃತ್ತಿಯ ಐಪಿಎಲ್ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನೆರಡು ಪಂದ್ಯಗಳು ಮುಗಿದರೆ ಈ ಆವೃತ್ತಿಗೆ ಅದ್ಧೂರಿ ತರೆ ಬೀಳಲಿದೆ. ಸದ್ಯ ಟೂರ್ನಿಯಲ್ಲಿ ಪರ್ಪಲ್ ಕ್ಯಾಪ್ ಮತ್ತು ಆರೆಂಜ್ ಕ್ಯಾಪ್ ರೇಸ್ನಲ್ಲಿರುವ ಆಟಗಾರರು ಯಾರು ಅವರ ಸಾಧನೆ ಏನು ಎಂಬ ಮಾಹಿತಿ ಇಂತಿದೆ.
ಡು ಪ್ಲೆಸಿಸ್ ಹಿಂದಿಕ್ಕುವರೇ ಗಿಲ್?
ಸದ್ಯ ಆರ್ಸಿಬಿ ತಂಡದ ಫಾಪ್ ಡು ಪ್ಲೆಸಿಸ್ ಅವರು ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಅವರು 14 ಪಂದ್ಯಗಳನ್ನು ಆಡಿ 730 ರನ್ ಬಾರಿಸಿದ್ದಾರೆ. ಇವರನ್ನು ಹಿಂದಿಕ್ಕುವ ಅವಕಾಶ ಗುಜರಾತ್ ಟೈಟನ್ಸ್ ತಂಡದ ಆಟಗಾರ ಶುಭಮನ್ ಗಿಲ್ಗೆ ಇದೆ. ಗಿಲ್ ಅವರು 15 ಪಂದ್ಯಗಳಿಂದ 722 ರನ್ ಗಳಿಸಿದ್ದಾರೆ. ಮುಂಬೈ ವಿರುದ್ಧದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗಿಲ್ 8 ರನ್ ಬಾರಿಸಿದರೆ ಅಗ್ರಸ್ಥಾನಕ್ಕೇರಲಿದ್ದಾರೆ. ಈಗಾಗಲೇ ಆರ್ಸಿಬಿ ಸೋತು ಟೂರ್ನಿಯಿಂದ ಹೊರಬಿದ್ದ ಕಾರಣ ಡು ಪ್ಲೆಸಿಸ್ಗೆ ಗಿಲ್ ದಾಖಲೆ ಮುರಿಯುವ ಅವಕಾಶವಿಲ್ಲ. ಮೂರನೇ ಸ್ಥಾನದಲ್ಲಿರುವ ಕೊಹ್ಲಿಗೂ ಅಸಾಧ್ಯ. ಹೀಗಾಗಿ ಈ ಬಾರಿ ಗಿಲ್ ಅವರು ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುವ ಸಾಧ್ಯತೆ ಅಧಿಕ.
ಇದನ್ನೂ ಓದಿ IPL 2023: ಗುಜರಾತ್-ಮುಂಬೈ ನಡುವೆ ಕ್ವಾಲಿಫೈಯರ್ ಪಂದ್ಯ; ಯಾರಿಗೆ ಒಲಿಯಲಿದೆ ಫೈನಲ್ ಲಕ್
ಪರ್ಪಲ್ ಕ್ಯಾಪ್ಗೆ ಶಮಿ-ರಶೀದ್ ಮಧ್ಯೆ ಪೈಪೋಟಿ
ಈ ಬಾರಿಯ ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ಗಾಗಿ ಗುಜರಾತ್ ಟೈಟನ್ಸ್ ತಂಡದ ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯ ಉಭಯ ಆಟಗಾರರು 15 ಪಂದ್ಯಗಳನ್ನಾಡಿ ಕ್ರಮವಾಗಿ 26 ಮತ್ತು 25 ವಿಕೆಟ್ ಕಬಳಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಯಾರು ಅತಿ ಹೆಚ್ಚು ವಿಕೆಟ್ ಪಡೆಯಲಿದ್ದಾರೆ ಎಂಬ ಕುತೂಹಲವಿದೆ. ಸದ್ಯ ಇವರಿಬ್ಬರಿಗೆ ಇರುವ ಪ್ರತಿಸ್ಪರ್ಧಿ ಎಂದರೆ ಮುಂಬೈ ಇಂಡಿಯನ್ಸ್ ತಂಡದ ಪಿಯೂಷ್ ಚಾವ್ಲಾ. ಅವರು 21 ವಿಕೆಟ್ ಪಡೆದಿದ್ದಾರೆ. ಮುಂಬೈ ತಂಡ ಇನ್ನೂ ಕೂಡ ರೇಸ್ನಲ್ಲಿರುವ ಕಾರಣ ಇವರಿಗೆ ಅಗ್ರಸ್ಥಾನಕ್ಕೇರುವ ಅವಕಾಶವಿದೆ.
ಮುಂಬೈvs ಗುಜರಾತ್ ಕ್ವಾಲಿಫೈಯರ್ ಕಾದಾಟ
ಲಕ್ನೋ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ಮಹತ್ವದ ಕ್ವಾಲಿಫೈಯರ್ ಪಂದ್ಯವನ್ನಾಡಲು ಸಜ್ಜಾಗಿದೆ. ಶುಕ್ರವಾರ ಅಹಮದಾಬಾದ್ನಲ್ಲಿ ನಡೆಯುವ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ತಂಡದ ಸವಾಲು ಎದುರಿಸಲಿದೆ. ಮೇಲ್ನೋಟಕ್ಕೆ ಮುಂಬೈ ಮತ್ತು ಗುಜರಾತ್ ಸಮಬಲದ ತಂಡಗಳಾಗಿ ಗೋಚರಿಸುತ್ತಿವೆ. ಎರಡೂ ತಂಡಗಳ ನಾಯಕತ್ವ ಬಲಿಷ್ಠವಾಗಿದೆ. ಆಯ್ಕೆ ಪ್ರಕ್ರಿಯೆ ಸಮತೋಲನದಿಂದ ಕೂಡಿದೆ. ಕೊನೆಯ ನಿಮಿಷದ ತನಕ ಹೋರಾಡುವ ಕೆಚ್ಚು ಎರಡೂ ತಂಡಗಳ ವೈಶಿಷ್ಟ. ಹೀಗಾಗಿ ಸ್ಪರ್ಧೆ ಅತ್ಯಂತ ರೋಚಕವಾಗಿ ಸಾಗುವ ನಿರೀಕ್ಷೆಯಿದೆ.