ನವದೆಹಲಿ: ಸತತ ಸೋಲಿನಿಂದ ಕಂಗಾಲಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಬಲಿಷ್ಠ ಕೆಕೆಆರ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಉಭಯ ತಂಡಗಳ ಈ ಮುಖಾಮುಖಿ ಗುರುವಾರ ರಾತ್ರಿ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈಗಾಗಲೇ ಆಡಿದ ಎಲ್ಲ ಐದು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೆಲ ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಪ್ಲೇಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ವಾರ್ನರ್ ಪಡೆಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿದೆ. ಒಂದೊಮ್ಮೆ ಇಲ್ಲಿಯೂ ಸೋತರೆ ಡೆಲ್ಲಿಯ ಮುಂದಿನ ಹಾದಿ ತಂತಿ ಮೇಲಿನ ನಡಿಗೆಯಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕೆಕೆಆರ್ ಕೂಡ ಒಂದು ಪಂದ್ಯದಲ್ಲಿ ಗೆಲುವು ಮತ್ತೊಂದು ಪಂದ್ಯದಲ್ಲಿ ಸೋಲು ಕಾಣುತ್ತಿದೆ. ಒಟ್ಟಾರೆಯಾಗಿ ತಂಡದ ಪ್ರದರ್ಶನ ವಿಭಿನ್ನ. ಅಸಾಧ್ಯವಾದುದನ್ನು ಸಾಧಿಸಿ ಸುಲಭದಲ್ಲಿ ಗೆಲ್ಲುವ ಪಂದ್ಯಗಳಲ್ಲಿ ಸೋಲು ಕಾಣುತ್ತಿದೆ. ಅದರಲ್ಲೂ ವಿಂಡೀಸ್ನ ಆ್ಯಂಡ್ರೆ ರಸೆಲ್ ಅವರಿಂದ ಇದುವರೆಗೂ ಯಾವುದೇ ದೊಡ್ಡ ಇನಿಂಗ್ಸ್ ಕಂಡುಬಂದಿಲ್ಲ. ರಿಂಕು ಸಿಂಗ್ ಮತ್ತು ವೆಂಕಟೇಶ್ ಅಯ್ಯರ್ ಅವರು ಹೊರತುಪಡಿಸಿ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಬೌಲಿಂಗ್ ಕೂಡ ಅಷ್ಟಾಗಿ ಘಾತಕವಾಗಿಲ್ಲ. ಉಮೇಶ್ ಯಾದವ್, ವರುಣ್ ಚಕ್ರವರ್ತಿ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ.
ಇದನ್ನೂ ಓದಿ IPL 2023: ಪಂಜಾಬ್ಗೆ ಚಾಲೆಂಜ್ ಮಾಡಲು ಸಜ್ಜಾದ ಆರ್ಸಿಬಿ
ಸಂಭಾವ್ಯ ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ರಿಲೀ ರೊಸೊ, ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅನ್ರಿಚ್ ನೋರ್ಜೆ, ಖಲೀಲ್ ಅಹ್ಮದ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.
ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ಸುನಿಲ್ ನಾರಾಯಣ್, ಶಾರ್ದೂಲ್ ಠಾಕೂರ್, ಸುಯಶ್ ಶರ್ಮಾ, ಲಾಕಿ ಫರ್ಗ್ಯುಸನ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.