ನವದೆಹಲಿ: ಸದ್ಯ ಐಪಿಎಲ್‌ನಲ್ಲಿ ಕಳಪೆ ಬ್ಯಾಟಿಂಗ್ ಮುಂದುವರಿಸಿ ಟೀಕಿಗೆ ಗುರಿಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಪೃಥ್ವಿ ಶಾ ಅವರಿಗೆ ತಂಡದ ಸಹಾಯಕ ಕೋಚ್ ಆಗಿರುವ ಶೇನ್ ವ್ಯಾಟ್ಸನ್ ಅವರು ಬೆಂಬಲ ಸೂಚಿಸಿದ್ದಾರೆ. ಯುವ ಆಟಗಾರನಲ್ಲಿ ಇನ್ನೂ ಕ್ರಿಕೆಟ್ ಕೌಶಲ್ಯವಿದೆ, ಹೀಗಾಗಿ ಅವರಿಗೆ ಮುಂದಿನ ಪಂದ್ಯಗಳಲ್ಲಿಯೂ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಬಾರಿ ಪೃಥ್ವಿ ಶಾ ಐಪಿಎಲ್‌ನಲ್ಲಿ ಒಟ್ಟು ಐದು ಇನಿಂಗ್ಸ್ ಆಡಿ ಕೇವಲ 34 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ಮಾತ್ರ ಎರಡಂಕಿಯ ಗಡಿ ದಾಟಿದ್ದಾರೆ. ಸದ್ಯ ಇವರ ಕಳಪೆ ಬ್ಯಾಟಿಂಗ್ ಫಾರ್ಮ್ ತಂಡಕ್ಕೆ ದೊಡ್ಡ ತಲೆನೋವಾಗಿದೆ. ಆದರೆ ಇವರಿಗೆ ತಂಡದ ಸಹಾಯಕ ಕೋಚ್ ಶೇನ್ ವ್ಯಾಟನ್ಸ್ ಮಾತ್ರ ಇನ್ನೂ ಅವಕಾಶ ನೀಡುವುದಾಗಿ ಹೇಳಿರುವುದು ಅಚ್ಚರಿ ತಂದಿದೆ.
“ಪೃಥ್ವಿ ಶಾ ಅವರ ಬಳಿ ಇನ್ನೂ ಕ್ರಿಕೆಟ್ ಕೌಶಲ್ಯವಿದೆ. ಅವರ ಬ್ಯಾಟಿಂಗ್ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅವರು ಒತ್ತಡ ಮುಕ್ತರಾಗಿ ಆಡಿದರೆ ಎಲ್ಲವು ಸರಿ ಹೋಗಲಿದೆ. ಅವರಿಗೆ ಇನ್ನಷ್ಟು ಅವಕಾಶ ಕೊಡುವ ಅಗತ್ಯ ಇದೆ” ಎಂದು ಶೇನ್ ವ್ಯಾಟ್ಸನ್ ಹೇಳಿದ್ದಾರೆ.
ಇದನ್ನೂ ಓದಿ IPL 2023: ತಮ್ಮನ ಐಪಿಎಲ್ ಪದಾರ್ಪಣೆಗೆ ಭಾವನಾತ್ಮಕ ಪೋಸ್ಟ್ ಹಾಕಿದ ಅಕ್ಕ ಸಾರಾ ತೆಂಡೂಲ್ಕರ್
ಜುಲೈ 25, 2021 ರಂದು ಶ್ರೀಲಂಕಾ ವಿರುದ್ಧದ ಟಿ20ಯಲ್ಲಿ ಪೃಥ್ವಿ ಶಾ ಅವರು ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ. ಸದ್ಯ ಟೀಮ್ ಇಂಡಿಯಾದಲ್ಲಿ ಆರಂಭಿಕ ಸ್ಥಾನಕ್ಕೆ ಪೈಪೋಟಿ ಇದೆ. ಈ ಮಧ್ಯೆ ಪೃಥ್ವಿ ಶಾ ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದರೆ, ಅವರಿಗೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಲು ತೊಡಕಾಗುವ ಸಾಧ್ಯತೆ ಇದೆ. ಡೆಲ್ಲಿ ಆಡಿರುವ 5 ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಮುಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಾದರೂ ಗೆಲುವು ಕಾಣಲಿದೆಯಾ ಎಂದು ಕಾದು ನೋಡಬೇಕಿದೆ.