ಮುಂಬಯಿ: ಇತ್ತೀಚೆಗಷ್ಟೆ ನ್ಯೂಜಿಲ್ಯಾಂಡ್ನಲ್ಲಿ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾದ ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ(jasprit bumrah) ಅವರು ಈ ಬಾರಿಯ ಐಪಿಎಲ್(IPL 2023) ಸೇರಿ ಐಸಿಸಿ ಟೆಸ್ಟ್ ವಿಶ್ವ ಕಪ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ವರದಿಯಾಗಿತ್ತು. ಆದರೆ ಇದೀಗ ಮುಂಬೈ ಇಂಡಿಯನ್ಸ್(mumbai indians) ಫ್ರಾಂಚೈಸಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬುಮ್ರಾ ಅವರು ಮುಂಬೈ ತಂಡ ಸೇರಿದ ವಿಡಿಯೊವೊಂದನ್ನು ಹಂಚಿಕೊಂಡಿದೆ. ಈ ವಿಡಿಯೊ ಕಂಡ ನೆಟ್ಟಿಗರು ಬುಮ್ರಾ ಐಪಿಎಲ್ ಆಡುವುದು ಖಚಿತ ಎಂದು ಹೇಳಲಾರಂಭಿಸಿದ್ದಾರೆ.
ಬುಮ್ರಾ ಅವರು ಕಳೆದ ಸೆಪ್ಟೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕೊನೆಯಾಗಿ ಆಡಿದ್ದರು. ಆ ಬಳಿಕ ಅವರು ಬೆನ್ನು ನೋವಿನ ಗಾಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಅವರು ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಟಿ 20 ವಿಶ್ವ ಕಪ್ ಸೇರಿ ಪ್ರಮುಖ ಟೂರ್ನಿಯಿಂದ ಹೊರಗುಳಿದಿದ್ದರು. ಕಳೆದ ಆಸೀಸ್ ವಿರುದ್ಧದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅವರು ಟೀಮ್ ಇಂಡಿಯಾಕ್ಕೆ ಮತ್ತೆ ಎಂಟ್ರಿಕೊಡುವ ನಿರೀಕ್ಷೆಯಲ್ಲಿದ್ದರು. ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಪ್ರಕಟಿಸಿದ ತಂಡದಲ್ಲಿಯೂ ಅವರು ಸ್ಥಾನ ಪಡೆದಿದ್ದರು. ಆದರೆ ಮತ್ತೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಅವರನ್ನು ಸರಣಿಯಿಂದ ಕೈಬಿಡಲಾಗಿತ್ತು.
ಹೆಚ್ಚಿನ ಚಿಕಿತ್ಸೆಗಾಗಿ ಬುಮ್ರಾ ಅವರನ್ನು ಬಿಸಿಸಿಐ ನ್ಯೂಜಿಲ್ಯಾಂಡ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿತ್ತು. ಅವರ ಚೇತರಿಕೆಗಾಗಿ ಕನಿಷ್ಠ 6 ತಿಂಗಳುಗಳ ಕಾಲಾವಕಾಶ ಬೇಕಾದಿತು ಎಂದು ಹೇಳಲಾಗಿತ್ತು. ಆದರೆ ಇದೀಗ ಅವರು ಮುಬೈ ಇಂಡಿಯನ್ಸ್ ಪಾಳಯದಲ್ಲಿ ಕಾಣಿಸಿಕೊಂಡಿರುವ ಕಾರಣ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳಲಾರಂಭಿಸಿದೆ.
ಮುಂಬೈ ಇಂಡಿಯನ್ಸ್ ತಂಡವು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಸ್ಪ್ರೀತ್ ಬುಮ್ರಾ ಅವರು ಮುಂಬೈ ತಂಡದ ವೇಗಿ ಜೋಫ್ರಾ ಆರ್ಚರ್ ಜತೆ ಪರಸ್ಪರ ಮಾತುಕತೆ ನಡೆಸುವ ವಿಡಿಯೊವನ್ನು ಹಂಚಿಕೊಂಡಿದೆ. ಇದೀಗ ಈ ವಿಡಿಯೊದಿಂದ ಬುಮ್ರಾ ಅವರು ಐಪಿಎಲ್ನಲ್ಲಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಇನ್ನೊಂದೆಡೆ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೆಲ ದಿನಗಳ ಹಿಂದೆ ಐಪಿಎಲ್ ಆಡುವುದು ಆಟಗಾರರಿಗೆ ಬಿಟ್ಟ ವಿಚಾರ ಈ ಬಗ್ಗೆ ಬಿಸಿಸಿಐ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಬುಮ್ರಾ ಅವರು ಈಪಿಎಲ್ ಆಡಲು ಮುಂದಾದರೆ ಎಂದು ಇನ್ನಷ್ಟೆ ತಿಳಿಯಬೇಕಿದೆ.
ಇದನ್ನೂ ಓದಿ IPL 2023: ಚೆಪಾಕ್ ಸ್ಟೇಡಿಯಂನಲ್ಲಿ ಧೋನಿ ಪಡೆ ಭರ್ಜರಿ ತಯಾರಿ; ವಿಡಿಯೊ ವೈರಲ್
ಮುಂಬೈ ಇಂಡಿಯನ್ಸ್ ತನ್ನ ಐಪಿಎಲ್ ಅಭಿಯಾನವನ್ನು ಏಪ್ರಿಲ್ 2 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.