ಲಕ್ನೋ: ಸಂಜೀವ್ ಗೋಯೆಂಕಾ ಮಾಲಿಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಬಾರಿಯೂ ಕಳೆದ ಆವೃತ್ತಿಯಂತೇ ಪ್ಲೇ ಆಫ್ಗೆ ಪ್ರವೇಶ ಪಡೆದಿದೆ. ಅಚ್ಚರಿ ಎಂದರೆ ಕಳೆದ ಬಾರಿಯೂ ಮೂರನೇ ತಂಡವಾಗಿ ಪ್ಲೇ ಆಫ್ಗೆ ಲಗ್ಗೆ ಇಟ್ಟಿತ್ತು. ಈ ಬಾರಿಯೂ ಇದೇ ಸ್ಥಾನದಲ್ಲಿದೆ. ತಂಡದ ಐಪಿಎಲ್ ಪ್ರದರ್ಶನದ ಬಗೆಗಿನ ಸಂಪೂರ್ಣ ಮಾಹಿತಿ ಇಂತಿದೆ.
ವಿಶ್ವದ ಶ್ರೇಷ್ಠ ಆಟಗಾರರನ್ನು ಹೊಂದಿರುವ ಲಕ್ನೋ ತಂಡಕ್ಕೆ ಈ ಬಾರಿ ದೊಡ್ಡ ಆಘಾತ ಎದುರಾಗಿರುವದು ತಂಡದ ನಾಯಕ, ಕನ್ನಡಿಗ ಕೆ.ಎಲ್ ರಾಹುಲ್ ಅವರು ಗಾಯಗೊಂಡು ಟೂರ್ನಿಯ ಮಧ್ಯಭಾಗದಿಂದ ಹೊರಬಿದ್ದಿರುವುದು. ಅವರ ಅನುಪಸ್ಥಿಯಲ್ಲಿ ಕೃಣಾಲ್ ಪಾಂಡ್ತ ಅವರು ತಂಡವನ್ನು ಮುನ್ನಡೆಸುತ್ತಿದ್ದರೂ ಅನುಭವದ ವಿಚಾರದಲ್ಲಿ ಅವರು ಹಿಂದಿದ್ದಾರೆ. ಲೀಗ್ನಲ್ಲಿ ಪಂದ್ಯ ಗೆಲ್ಲಿಸಿದ್ದರೂ ಮಹತ್ವದ ಪಂದ್ಯದಲ್ಲಿ ಡಿಫರೆಂಡ್ ಗೇಮ್ ಪ್ಲ್ಯಾನ್ ಅಗತ್ಯ. ಜತೆಗೆ ಒತ್ತಡವನ್ನು ನಿಭಾಯಿಸುವ ಕಲೆಯೂ ಇಲ್ಲಿ ಮುಖ್ಯವಾಗಿರುತ್ತದೆ. ಇದೆಲ್ಲವನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಿ ಲಕ್ನೋ ಚೊಚ್ಚಲ ಕಪ್ ಎತ್ತಿದ್ದರೆ ತಮ್ಮ ಹಾರ್ದಿಕ್ ಪಾಂಡ್ಯರಂತೆ ಕೃಣಾಲ್ ಕೂಡ ಐಪಿಎಲ್ನ ಇತಿಹಾಸದ ಪುಟ ಸೇರಲಿದ್ದಾರೆ.
ಲಕ್ನೋಗೆ ಲಕ್ ಇದ್ದಂತೆ ತೋರುತ್ತಿದೆ
ಲಕ್ನೋ ತಂಡಕ್ಕೆ ಈ ಬಾರಿಯೊಂದು ಲಕ್ ಇದ್ದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಲಕ್ನೋ ಹೀನಾಯ ಸೋಲು ಕಾಣುವ ಸ್ಥಿಯಲ್ಲಿತ್ತು. ಆದರೆ ಇದೇ ವೇಳೆ ಜೋರಾಗಿ ಸುರಿದ ಮಳೆಯಿಂದ ಪಂದ್ಯ ರದ್ದಾಯಿತು. ಇಲ್ಲಿ ಸಿಕ್ಕ ಒಂದು ಅಂಕವನ್ನು ಹಿಡಿದುಕೊಂಡು ಲಕ್ನೋ ಪ್ಲೇ ಆಫ್ ವರೆಗೆ ಬಂದು ನಿಂತಿದೆ. ಸದ್ಯ ಮುಂದಿನ ಎರಡು ಹರ್ಡಲ್ಸ್ ದಾಡಿದರೆ ಫೈನಲ್ ಪ್ರವೇಶ ಪಡೆಯಲಿದೆ.
ಇದನ್ನೂ ಓದಿ IPL 2023: ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವುದೇ ಗುಜರಾತ್; ತಂಡದ ಏಳು-ಬೀಳಿನ ಸಂಪೂರ್ಣ ಮಾಹಿತಿ ಇಲ್ಲಿದೆ
ತಂಡದ ಪ್ಲಸ್ ಮತ್ತು ಮೈನಸ್
ಇತರ ತಂಡಗಳಿಗೆ ಹೋಲಿಸಿದರೆ ಈ ತಂಡದಲ್ಲಿರುವ ವಿದೇಶಿ ಆಟಗಾರರು ಅತ್ಯಂತ ಬಲಿಷ್ಠರಾಗಿದ್ದಾರೆ. ನಿಕೋಲಸ್ ಪೂರನ್, ಮಾರ್ಕಸ್ ಸ್ಟೋಯಿನಿಸ್ ಮತ್ತು ಕ್ವಿಂಟನ್ ಡಿ ಕಾಕ್ ಉತ್ತಮ ಬ್ಯಾಟಿಂಗ್ ಲಯದಲ್ಲಿದ್ದಾರೆ. ಯುವ ಆಟಗಾರ ರವಿ ಬಿಷ್ಣೋಯಿ ಅವರಂತೂ ಜಿದ್ದಿಗೆ ಬಿದ್ದವರಂತೆ ಬೌಲಿಂಗ್, ಫೀಲ್ಡಿಂಗ್ನಲ್ಲಿ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ತೋರುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿಯೂ ಈ ಆಟಗಾರರು ಮಿಂಚಿದರೆ ಪಂದ್ಯಕ್ಕೆ ಗೆಲುವು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.
ಕಳೆದ ಬಾರಿ ಆರ್ಸಿಬಿ ವಿರುದ್ಧ ಮುಗ್ಗರಿಸಿತ್ತು
ಕಳೆದ ಬಾರಿ ನಡೆದ 15ನೇ ಆವೃತ್ತಿಯ ಐಪಿಎಲ್ನಲ್ಲಿ ಚೊಚ್ಚಲ ತಂಡವಾಗಿ ಕಣಕ್ಕಿಳಿದ್ದ ಲಕ್ನೋ ತಂಡ ಮೂರನೇ ತಂಡವಾಗಿ ಪ್ಲೇ ಆಫ್ಗೆ ಪ್ರವೇಶ ಪಡೆದಿತ್ತು. ಇಲ್ಲಿ ಆರ್ಸಿಬಿ ತಂಡ ಎದುರಾಗಿತ್ತು. ಆದರೆ ಈ ಪಂದ್ಯಲ್ಲಿ ಆರ್ಸಿಬಿ ವಿರುದ್ಧ ಮುಗ್ಗರಿಸಿದ ಲಕ್ನೋ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತ್ತು. ಈ ಬಾರಿ ಮುಂಬೈ ವಿರುದ್ಧ ಎಲಿಮಿನೇಟರ್ ಪಂದ್ಯ ಆಡಲಿದೆ. ಈ ಪಂದ್ಯವನ್ನು ಗೆದ್ದು ಮುಂದೆ ಸಾಗಲಿದೆಯಾ ಅಥವಾ ಕಳೆದ ಬಾರಿಯಂತೆ ಸೋತು ಹೊರಬೀಳಲಿದೆಯಾ ಎಂದು ಕಾದು ನೋಡಬೇಕಿದೆ.