ಮುಂಬಯಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಏಕದಿನ ವಿಶ್ವ ಕಪ್ ಟೂರ್ನಿಯ ಕಾರಣದಿಂದಾಗಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಈ ಬಾರಿಯ ಐಪಿಎಲ್ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಅನುಮಾನಕ್ಕೆ ರೋಹಿತ್ ಶರ್ಮಾ(Rohit Sharma) ತೆರೆ ಎಳೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಎಲ್ಲ ಆಟಗಾರರು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಐಪಿಎಲ್ ಅಭಿಮಾನಿಗಳ ಎಲ್ಲ ಗೊಂದಲವನ್ನು ದೂರ ಮಾಡಿದ್ದಾರೆ.
ಅತಿಯಾದ ಕ್ರಿಕೆಟ್ ಸರಣಿಯಿಂದಾಗಿ ಈಗಾಗಲೇ ಹಲವು ಟೀಮ್ ಇಂಡಿಯಾದ ಆಟಗಾರರು ಗಾಯಗೊಂಡು ಇನ್ನೂ ತಂಡ ಸೇರಿಲ್ಲ. ಸದ್ಯ ಉತ್ತಮ ಫಾರ್ಮ್ನಲ್ಲಿರುವ ಆಟಗಾರರು ಐಪಿಎಲ್ ಆಡುವ ವೇಳೆ ಗಾಯಗೊಂಡರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವ ಕಪ್ ಟೂರ್ನಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬಿಸಿಸಿಐ(bcci) ಮುಂಜಾಗ್ರತಾ ಕ್ರಮವಾಗಿ ಈ ಬಾರಿಯ ಐಪಿಎಲ್ನಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಿದೆ ಎಂದು ವರದಿಯಾಗಿತ್ತು.
ಇದನ್ನೂ ಓದಿ IPL 2023: ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ನೃತ್ಯ ಮಾಡಲಿದ್ದಾರೆ ರಶ್ಮಿಕಾ ಮಂದಣ್ಣ!
ಇದೇ ವಿಚಾರವಾಗಿ ಮಾತನಾಡಿದ ರೋಹಿತ್ ಶರ್ಮಾ “ಆಟಗಾರರು ವಿಶ್ರಾಂತಿ ಪಡೆಯುತ್ತಾರೋ ಇಲ್ಲವೋ ಎಂಬುದು ಅವರ ತಂಡಗಳ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ಐಪಿಎಲ್ ಸಮಯದಲ್ಲಿ ಯಾವುದೇ ಆಟಗಾರ ವಿಶ್ರಾಂತಿ ಪಡೆಯಲಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ನಾವು ಕೆಲವು ತಂಡಗಳಿಗೆ ಸಲಹೆಗಳನ್ನು ನೀಡಿದ್ದೇವೆ ಆದರೆ ಅದನ್ನು ಒಪ್ಪಿಕೊಳ್ಳುವುದು ಅಥವಾ ಬಿಡುವುದು ಫ್ರಾಂಚೈಸಿಗೆ ಬಿಟ್ಟದ್ದು. ಏಕೆಂದರೆ ಅವರು ಲೀಗ್‌ನಲ್ಲಿ ಆಟಗಾರರ ಮಾಲೀಕರಾಗಿರುವುದರಿಂದ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ಹೇಳಿದರು.