ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಬೇಕಿದ್ದ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯ ಮಳೆಯಿಂದ ರದ್ದುಗೊಂಡು ಮೀಸಲು ದಿನಕ್ಕೆ ಮುಂದೂಡಿಕೆಯಾಗಿದೆ. ಆದರೆ ಭಾನುವಾರ ಈ ಸ್ಟೇಡಿಯಂನಲ್ಲಿ ನಡೆದ ಒಂದು ಘಟನೆಗೆ ಇದೀಗ ಎಲ್ಲಡೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೈನಲ್ ಪಂದ್ಯವನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸ್ಟೇಡಿಯಂನಲ್ಲಿ ಮಹಿಳೆಯೊಬ್ಬರು ಇದ್ದಕ್ಕಿಂದಂತೆ ತಮ್ಮ ಪಕ್ಕದಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿಗೆ ಥಳಿಸಲು ಆರಂಭಿಸಿದ್ದಾರೆ. ಬಳಿಕ ಅವರನ್ನು ಎರಡು ಬಾರಿ ತಳ್ಳಿ ನೆಲಕ್ಕೆ ಉರುಳಿಸಿದ್ದಾರೆ. ಈ ವೇಳೆ ಕುರ್ಚಿ ಮೇಲೆ ಎದ್ದು ಬಿದ್ದು ಪೊಲೀಸ್ ಅಧಿಕಾರಿ ಅಲ್ಲಿಂದ ತೆರಳಿದ್ದಾರೆ. ಇಲ್ಲಿಗೆ ಸುಮ್ಮನಾಗದ ಮಹಿಳೆ, ಅಧಿಕಾರಿ ತೆರಳುವ ವೇಳೆಯೂ ಬೆನ್ನಿಗೆ ಮತ್ತೆರಡು ಗುದ್ದು ನೀಡಿದ್ದಾರೆ. ಘಟನೆ ಸಂಭವಿಸುವ ವೇಳೆ ಅಲ್ಲಿದ್ದ ಜನರು ಸುಮ್ಮನೇ ನೋಡುತ್ತಾ ನಿಂತಿದ್ದರು. ಈ ವಿಡಿಯೊ ಇದೀಗ ವೈರಲ್ ಆಗಿದೆ. ಸದ್ಯ ಈ ಮಹಿಳೆ ಯಾವ ಕಾರಣಕ್ಕೆ ಪೊಲೀಸ್ ಅಧಿಕಾರಿಗೆ ಈ ರೀತಿ ಥಳಿಸಿದ್ದಾರೆ ಎಂದು ತಿಳಿದುಬಂದಿಲ್ಲ.
ಇದನ್ನೂ ಓದಿ IPL 2023: ಶುಭಮನ್ ಗಿಲ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಸಚಿನ್ ಹೇಳಿದ ಮಾತುಗಳೇನು?
This woman slapped and hit this male officer like anything and the helpless guy couldn’t do anything. Is this woman empowerment? pic.twitter.com/m4sMZg0Lds
— ∆ (@TheNaziLad) May 28, 2023
ವಿಡಿಯೊ ಕಂಡ ಕೆಲವರು ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣಕ್ಕೆ ಈ ಮಹಿಳೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಕೆಲವರು ಮಳೆಯಿಂದ ಪಂದ್ಯ ಸ್ಥಗಿತಗೊಂಡ ಸಿಟ್ಟಿನಲ್ಲಿ ಈ ಮಹಿಳೆ ಈ ರೀತಿ ವರ್ತನೆ ತೋರಿದ್ದಾರೆ ಎಂದು ಹಾಸ್ಯಮಯ ಕಮೆಂಟ್ ಮಾಡಿದ್ದಾರೆ.
ಮಳೆಯಿಂದ ಮುಂದೂಡಿಕೆಯಾದ ಈ ಫೈನಲ್ ಪಂದ್ಯ ಇಂದು(ಸೋಮವಾರ) ನಡೆಯಲಿದೆ. ಆದರೆ ಇಂದು ಕೂಡ ಇಲ್ಲಿ ಮಳೆ ಬರುವ ಸಾಧ್ಯತೆ ಅಧಿಕ ಎಂದು ಹೇಳಲಾಗಿದೆ. ಒಂದೊಮ್ಮೆ ಇವತ್ತೂ ಕೂಡ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಲೀಗ್ನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ತಂಡವನ್ನು ಚಾಂಪಿಯನ್ ಎಂದು ಘೋಷಣೆ ಮಾಡಲಾಗುವುದು.