ಹೈದರಾಬಾದ್: ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಾಹಲ್(yajurveda chahal) ಅವರು ಟಿ20 ಕ್ರಿಕೆಟ್ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಈ ದಾಖಲೆ ಮಾಡಿದ ಮೊದಲ ಭಾರತೀಯ ಬೌಲರ್ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದ ಚಾಹಲ್ ತಮ್ಮ ಸ್ಪಿನ್ ಮ್ಯಾಜಿಕ್ ಮೂಲಕ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಈ ಸಾಧನೆಯೊಂದಿಗೆ ಅವರು ಟಿ20 ಕ್ರಿಕೆಟ್ನಲ್ಲಿ 300 ವಿಕೆಟ್ ಪಡೆದ ಸಾಧನೆ ಮಾಡಿದರು.
ಸದ್ಯ ಚಾಹಲ್ ಅವರು 265 ಟಿ20 ಪಂದ್ಯಗಳಲ್ಲಿ 23.60 ರ ಸರಾಸರಿ ಮತ್ತು 7.58 ರ ಎಕಾನಮಿ ರೇಟ್‌ನಲ್ಲಿ 303 ವಿಕೆಟ್‌ಗಳನ್ನು ಪಡೆದಿದ್ದಾರೆ. 25 ರನ್ಗೆ ಆರು ವಿಕೆಟ್ ಪಡೆದದ್ದು ಟಿ20 ಕ್ರಿಕೆಟ್ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. 72 ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅವರು 121 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್ನಲ್ಲಿ
170 ವಿಕೆಟ್ ಗಳನ್ನು ಪಡೆದಿದ್ದಾರೆ
72 ರನ್ ಗೆಲುವು ಸಾಧಿಸಿದ ರಾಜಸ್ಥಾನ್
ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಬಾರಿಸಿತು. ಜವಾಬಿತ್ತ ಸನ್ರೈಸರ್ಸ್ ಹೈದರಾಬಾದ್ ತನ್ನ ಪಾಲಿನ ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ 72 ರನ್ಗಳ ಹೀನಾಯ ಸೋಲು ಕಂಡಿತು.
ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ಆರಂಭದಲ್ಲೇ ಕುಸಿತ ಕಂಡಿತು. ತಂಡದ ಖಾತೆ ತರೆಯುವ ಮುನ್ನವೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್ ಶರ್ಮಾ ಅವರನ್ನು ಟ್ರೆಂಟ್ ಬೌಲ್ಟ್ ಮೊದಲ ಓವರ್ನಲ್ಲಿ ಕ್ಲೀನ್ ಬೌಲ್ಡ್ ಮಾಡಿದರೆ, ಮುಂದಿನ ಓವರ್ನಲ್ಲಿ ಜಾಸನ್ ಹೋಲ್ಡರ್ ರಾಹುಲ್ ತ್ರಿಪಾಠಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಕನ್ನಡಿಗ ಮಾಯಾಂಕ್ ಅಗರ್ವಾಲ್ 27, ಅಬ್ದುಲ್ ಸಮದ್ ಅಜೇಯ 32 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರರು ದೊಡ್ಡ ಮೊತ್ತ ಗಳಿಸುವಲ್ಲಿ ಯಶಸ್ಸು ಕಾಣಲಿಲ್ಲ. ಆರ್ಆರ್ ಬೌಲಿಂಗ್ ದಾಳಿಗೆ ಕೇವಲ ಪೆವಿಲಿಯನ್ ಪರೇಡ್ ಕಂಡು ಬಂತು. ಪದಾರ್ಪಣ ಪಂದ್ಯವನ್ನಾಡಿದ ಇಂಗ್ಲೆಂಡ್ ತಂಡದ ಡೇಂಜರಸ್ ಬ್ಯಾಟರ್ ಹ್ಯಾರಿ ಬ್ರೂಕ್ಸ್ ಕೇವಲ 13 ರನ್ಗಳಿಸಿ ನಿರಾಸೆ ಮೂಡಿಸಿದರು. ರಾಜಸ್ಥಾನ್ ಪರ ಬೌಲಿಂಗ್ನಲ್ಲಿ ಯಜುವೇಂದ್ರ ಚಾಹಲ್ ನಾಲ್ಕು ಓವರ್ ಬೌಲಿಂಗ್ ನಡೆಸಿ ಕೇವಲ 17 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಟ್ರೆಂಟ್ ಬೌಲ್ಟ್ 24 ರನ್ಗೆ 2 ವಿಕೆಟ್ ಉರುಳಿಸಿದರು. ಅಂತಿಮ ಹಂತದ 2 ಓವರ್ಗಳಲ್ಲಿ ಸಮದ್ ಸಿಡಿದು ನಿಂತ ಪರಿಣಾಮ ತಂಡ ನೂರರ ಗಡಿ ದಾಟಿ ಸಮಾಧಾನ ಪಟ್ಟಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ಪರ ಜಾಸ್ ಬಟ್ಲರ್(54), ಯಶಸ್ವಿ ಜೈಸ್ವಾಲ್(54) ಮತ್ತು ನಾಯಕ ಸಂಜು ಸ್ಯಾಮ್ಸನ್(55) ಅವರು ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು.