ಜೈಪುರ: ರಾಜಸ್ಥಾನ್ ತಂಡದ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಐಪಿಎಲ್ ಕ್ರಿಕೆಟ್ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಸಾವಿರ ರನ್ ಪೂರೈಸಿದ ದ್ವಿತೀಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಜೈಸ್ವಾಲ್ 35 ರನ್ ಗಳಿಸಿಸುವ ಮೂಲಕ ಈ ಮೈಲಿಗಲ್ಲು ತಲುಪಿದರು.
ಐಪಿಎಲ್ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಸಾವಿರ ರನ್ ಪೂರೈಸಿದ ದಾಖಲೆ ರಿಷಭ್ ಪಂತ್ ಹೆಸರಿನಲ್ಲಿದೆ. ಪಂತ್ ಅವರು 20 ವರ್ಷ 218 ದಿನ ಆಗಿದ್ದಾಗ 1000 ರನ್ ಪೂರೈಸಿದ್ದರು. ಜೈಸ್ವಾಲ್ 21 ವರ್ಷ 130 ದಿನದಲ್ಲಿ ಈ ಸಾಧನೆ ಮಾಡಿದ್ದರೆ. ಡೆಲ್ಲಿ ತಂಡದ ಆಟಗಾರ ಪೃಥ್ವಿ ಶಾ ಅವರು ಮೂರನೇ ಸ್ಥಾನಲ್ಲಿದ್ದಾರೆ.
ಸದ್ಯ ಆಡಿದ ಎಲ್ಲ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್ ನಡೆಸುತ್ತಿರುವ ಜೈಸ್ವಾಲ್ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದರು ಅಚ್ಚರಿಯಿಲ್ಲ. ಈಗಾಗಲೇ ಅವರು ಐಪಿಎಲ್ನಲ್ಲಿ 34 ಪಂದ್ಯಗಳಿಂದ 1024 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಒಳಗೊಂಡಿದೆ.
ಇದನ್ನೂ ಓದಿ IPL 2023: ಐಪಿಎಲ್ನಲ್ಲಿ ನೂತನ ಮೈಲುಗಲ್ಲು ತಲುಪಿದ ಯಜವೇಂದ್ರ ಚಾಹಲ್
ಪಂದ್ಯ ಸೋತ ರಾಜಸ್ಥಾನ್
ಅತ್ಯಂತ ರೋಚಕವಾಗಿ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾನುವಾರದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ (95) ಮತ್ತು ನಾಯಕ ಸ್ಯಾಮ್ಸನ್ (ಅಜೇಯ 66) ಅವರ ಅರ್ಧಶತಕದ ನೆರವಿನಿಂದ 2 ವಿಕೆಟ್ ನಷ್ಟಕ್ಕೆ ಬರೋಬ್ಬರಿ 214 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಹೈದರಾಬಾದ್ 6 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿ ಜಯಭೇರಿ ಮೊಳಗಿಸಿತು.