ಜೈಪುರ: ಅತ್ಯಂತ ರೋಚಕವಾಗಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಭಾನುವಾರದ ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಗೆಲುವು ದಾಖಲಿಸಿತು. ಇದೇ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ (95) ಮತ್ತು ನಾಯಕ ಸ್ಯಾಮ್ಸನ್ (ಅಜೇಯ 66) ಅವರ ಅರ್ಧಶತಕದ ನೆರವಿನಿಂದ 2 ವಿಕೆಟ್ ನಷ್ಟಕ್ಕೆ ಬರೋಬ್ಬರಿ 214 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಹೈದರಾಬಾದ್ 6 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿತು.
ರಾಜಸ್ಥಾನ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಯಜವೇಂದ್ರ ಚಾಹಲ್ ಅವರು ನಾಲ್ಕು ಓವರ್ ಎಸೆದು 29 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರು. ಇದೇ ವೇಳೆ ಅವರು ಐಪಿಎಲ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಡೇವೋನ್ ಬ್ರಾವೊ ಅವರ ದಾಖಲೆಯನ್ನು ಸರಿಗಟ್ಟಿದರು. ಬ್ರಾವೊ ಅವರು 183 ವಿಕೆಟ್ಗಳನ್ನು ಕಿತ್ತು ಅಗ್ರಸ್ಥಾನದಲ್ಲಿದ್ದರು. ಇದೀಗ ಚಾಹಲ್ ಕೂಡ 183 ವಿಕೆಟ್ ಕಿತ್ತಿದ್ದಾರೆ. ಮುಂದಿನ ಪಂದ್ಯದಲ್ಲಿ ಚಾಹಲ್ ಒಂದು ವಿಕೆಟ್ ಕಿತ್ತರೆ ಬ್ರಾವೊ ಅವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಏರಲಿದ್ದಾರೆ. ಬ್ರಾವೊ ಅವರು ಈಗಾಗಲೇ ಐಪಿಎಲ್ನಿಂದ ನಿವೃತ್ತಿ ಹೊಂದಿದ್ದಾರೆ. ಹೀಗಾಗಿ ಚಾಹಲ್ಗೆ ಸದ್ಯ ಪೈಪೋಟಿ ಇಲ್ಲ.
ಇದನ್ನೂ ಓದಿ IPL 2023: ರಾಜಸ್ಥಾನ್,ಲಕ್ನೋಗೆ ಸೋಲು; ಐಪಿಎಲ್ ಅಂಕಪಟ್ಟಿ ಹೇಗಿದೆ?
ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಪಿಯೂಷ್ ಚಾವ್ಲಾ(174*) ಮತ್ತು ಅಮೀತ್ ಮಿಶ್ರಾ(172*) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಉಭಯ ಆಟಗಾರರು ಐಪಿಎಲ್ ಆಡುತ್ತಿರುವುದರಿಂದ ಇವರಿಗೂ ಬ್ರಾವೊ ದಾಖಲೆ ಮುರಿಯುವ ಅವಕಾಶವಿದೆ.