ವಿಶಾಖಪಟ್ಟಣಂ: ನಿನ್ನೆ(ಬುಧವಾರ) ನಡೆದ ಐಪಿಎಲ್(IPL 2024) ಪಂದ್ಯದಲ್ಲಿ ಕೆಕೆಆರ್(KKR) ತಂಡದ ಹಾರ್ಡ್ ಹಿಟ್ಟರ್ ಆ್ಯಂಡ್ರೆ ರಸೆಲ್(Andre Russell) ಅವರನ್ನು ಡೆಲ್ಲಿ ತಂಡದ ವೇಗಿ ಇಶಾಂತ್ ಶರ್ಮ(Ishant Sharma) ಡೆಡ್ಲಿ ಯಾರ್ಕರ್ ಮೂಲಕ ಕ್ಲೀನ್ ಬೌಲ್ಡ್ ಮಾಡಿದ ವಿಡಿಯೊ ವೈರಲ್(viral video) ಆಗಿದೆ. ಇಶಾಂತ್ ಅವರ ಈ ಯಾರ್ಕರ್ಗೆ ಸ್ವತಃ ರಸೆಲ್ ಕೂಡ ಮೈದಾನದಲ್ಲೇ ವೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ವಿಶಾಖಪಟ್ಟಣದ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 16ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ರೆಸಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮೂಲಕ ಡೆಲ್ಲಿ ಬೌಲಗಳನ್ನು ಕಾಡಿದರು. ಇನ್ನೇನು ಅರ್ಧಶತಕ ಬಾರಿಸುತ್ತಾರೆ ಎನ್ನುವಷ್ಟರಲ್ಲಿ ಇಶಾಂತ್ ಶರ್ಮಗೆ ಕ್ಲೀನ್ ಬೌಲ್ಟ್ ಆಗಿ ವಿಕೆಟ್ ಕೈಚೆಲ್ಲಿದರು.
ಡೆಲ್ಲಿ ತಂಡದ ಬೌಲಿಂಗ್ ಇನಿಂಗ್ಸ್ನ ಕೊನೆಯ ಓವರ್ ಇಶಾಂತ್ ಶರ್ಮ ಎಸೆದರು. ಈ ಓವರ್ನ ಮೊದಲ ಎಸೆತದಲ್ಲೇ ಅಪಾಯಕಾರಿ ರೆಸಲ್ ಅವರನ್ನು ಸೊಗಸಾದ ಯಾರ್ಕರ್ ಮೂಲಕ ಕ್ಲೀನ್ ಬೌಲ್ಡ್ ಮಾಡಿದರು. ಈ ಯಾರ್ಕರ್ ಕಂಡು ರಸೆಲ್ ಔಟಾದರೂ ಕೂಡ ಬ್ಯಾಟ್ ಮೇಲೆತ್ತಿ ಚಪ್ಪಾಳೆ ತಟ್ಟುತ್ತಾ ಇಶಾಂತ್ಗೆ ಮೆಚ್ಚುಗೆ ಸೂಚಿಸಿದರು. ಇಶಾಂತ್ ಅವರ ಈ ಘಾತಕ ಯಾರ್ಕರ್ ವಿಡಿಯೊವನ್ನು ಐಪಿಎಲ್ ಕೂಡ ತನ್ನ ಅಧಿಕೃತ ಟ್ವೀಟರ್ ಎಕ್ಸ್ನಲ್ಲಿ ಹಂಚಿಕೊಂಡು ‘ಯಾರ್ಕ್ಡ್’ ಎಂದು ಬರೆದುಕೊಂಡಿದೆ.
ಇದನ್ನೂ ಓದಿ IPL 2024: ಕೇವಲ ಒಂದು ಸಿಕ್ಸರ್ ಸಿಡಿಸಿ ರೋಹಿತ್ ದಾಖಲೆ ಮುರಿದ ಡೇವಿಡ್ ವಾರ್ನರ್
YORKED! 🎯
— IndianPremierLeague (@IPL) April 3, 2024
Ishant Sharma with a beaut of a delivery to dismiss the dangerous Russell!
Head to @JioCinema and @StarSportsIndia to watch the match LIVE#TATAIPL | #DCvKKR | @ImIshant pic.twitter.com/6TjrXjgA6R
ರಸೆಲ್ ಅವರು ಈ ಪಂದ್ಯದಲ್ಲಿ 19 ಎಸೆತಗಳಿಂದ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 41 ರನ್ ಬಾರಿಸಿದರು. ಇಶಾಂತ್ ಮೂರು ಓವರ್ ಬೌಲಿಂಗ್ ನಡೆಸಿ 2 ವಿಕೆಟ್ ಕಿತ್ತರು. ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ಫುಲ್ ಜೋಶ್ನಲ್ಲಿ ಬ್ಯಾಟಿಂಗ್ ನಡೆಸಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ ಬರೋಬ್ಬರಿ 272 ರನ್ ಬಾರಿಸಿತು. ಈ ಬೃಹತ್ ಮೊತ್ತವನ್ನು ಕಂಡು ಕಂಗಾಲಾದ ಡೆಲ್ಲಿ ಕ್ಯಾಪಿಟಲ್ಸ್ 17.2 ಓವರ್ಗಳಲ್ಲಿ 166 ರನ್ ಬಾರಿಸಿ ಸರ್ವಪತನ ಕಂಡಿತು. ಕೋಲ್ಕತ್ತಾ ತಂಡ 106ರನ್ ಗೆಲುವು ಸಾಧಿಸಿತು.
ಆರ್ಸಿಬಿ ದಾಖಲೆ ಪತನ
ಇದೇ ಪಂದ್ಯದಲ್ಲಿ ಆರ್ಸಿಬಿಯ ದಾಖಲೆಯೊಂದು ಪತನಗೊಂಡಿತು. ಕೆಕೆಆರ್ 272 ರನ್ ಬಾರಿಸಿ ಐಪಿಎಲ್ನಲ್ಲಿ ಅತ್ಯಧಿಕ ರನ್ ಗಳಿಸಿದ ಎರಡನೇ ತಂಡ ಎಂಬ ದಾಖಲೆ ಬರೆಯಿತು. ಈ ಮೂಲಕ 2ನೇ ಸ್ಥಾನದಲ್ಲಿದ್ದ ಆರ್ಸಿಬಿ ಮೂರನೇ ಸ್ಥಾನಕ್ಕೆ ಕುಸಿಯಿತು. ಕಳೆದ ವಾರವಷ್ಟೇ ಸನ್ರೈಸರ್ಸ್ ಹೈದರಾಬಾದ್ ತಂಡ ಮುಂಬೈ ವಿರುದ್ಧ 277 ರನ್ ಬಾರಿಸಿ ಐಪಿಎಲ್ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ನಿರ್ಮಿಸಿತ್ತು. ಇದೀಗ ಒಂದೇ ವಾರದ ಅಂತರದಲ್ಲಿ ಈ ಟೂರ್ನಿಯಲ್ಲಿ ಮತ್ತೊಂದು ದ್ವಿತೀಯ ಗರಿಷ್ಠ ಮೊತ್ತ ದಾಖಲಾಯಿತು.