ಬೆಂಗಳೂರು: ಐಪಿಎಲ್ 2024 ರ (IPL 2024) ಹರಾಜು ದುಬೈನಲ್ಲಿ ನಡೆಯಬಹುದು ಎಂದು ಹೇಳಲಾಗಿದೆ. ಜತೆಗೆ ಆಟದ ಒಟ್ಟು ದಿನಗಳನ್ನೂ ಕಡಿಮೆ ಮಾಡಿದೆ ಎಂದು ವರದಿಯಾಗಿದೆ. ಡಿಸೆಂಬರ್ 15 ರಿಂದ 19 ರವರೆಗೆ ಹರಾಜು ನಡೆಸಲು ಬಿಸಿಸಿಐ ಎದುರು ನೋಡುತ್ತಿದೆ ಎಂಬುದಾಗಿ ಹೇಳಲಾಗಿದೆ.
ಫ್ರಾಂಚೈಸಿಗಳಿಗೆ ಹರಾಜು ಮತ್ತು ಟೂರ್ನಿಯ ಕುರಿತು ಯಾವುದೇ ಔಪಚಾರಿಕ ಸೂಚನೆಯನ್ನು ಕಳುಹಿಸಲಾಗಿಲ್ಲವಾದರೂ, ಐಪಿಎಲ್ ಹರಾಜು ದುಬೈನಲ್ಲಿ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜತೆಗೆ ಡಿಸೆಂಬರ್ ಎರಡನೇ ವಾರಕ್ಕೆ ನಿಗದಿಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಐಪಿಎಲ್ 2023 ರ ಹರಾಜು ಅಂತಿಮವಾಗಿ ಕೊಚ್ಚಿಯಲ್ಲಿ ನಡೆಯಿತು. ಆದರೆ ಬಿಸಿಸಿಐ ಅದನ್ನು ಟರ್ಕಿಯ ಇಸ್ತಾಂಬುಲ್ನಲ್ಲಿ ನಡೆಸಲು ಪರಿಗಣಿಸಿತ್ತು. ಹೀಗಾಗಿ ಹಿಂದಿನ ವರ್ಷದ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದುವೇ ಪ್ರಾಥಮಿಕ ತಾಣವಾಗಿರಬಹುದು ಎಂದು ಹೇಳಲಾಗುತ್ತಿಎ. ಆದರೆ, ಬ ಗಲ್ಫ್ ನ ನಗರವನ್ನು ಹರಾಜು ತಾಣವೆಂದು ಪರಿಗಣಿಸುವ ಕುರಿತು ಮಾತುಕತೆಗಳು ನಡೆಯುತ್ತಿವೆ.
ಟ್ರೇಡಿಂಗ್ ವಿಂಡೊ ಓಪನ್
ಪ್ರಸ್ತುತ ಆಟಗಾರರ ಟ್ರೇಡಿಂಗ್ ವಿಂಡೋ ತೆರೆದಿದೆ. ಆಟಗಾರರನ್ನು ಹರಾಜಿಗೆ ಮೊದಲು ಬದಲಿಸಿಕೊಳ್ಳಬಹುದು, ಆದರೆ ಇಲ್ಲಿಯವರೆಗೆ ಐಪಿಎಲ್ ಫ್ರಾಂಚೈಸಿಗಳ ನಡುವೆ ಆಟಗಾರರ ವಿನಿಮಯದ ಬಗ್ಗೆ ಯಾವುದೇ ವರದಿಗಳು ಆಗಿಲ್ಲ . ಇದು ಮೂರು ವರ್ಷಗಳ ಗುತ್ತಿಗೆ ಅವಧಿಯ ಕೊನೇ ಕೊನೆಯ ಅವಧಿಯಾಗಿರುವ ಕಾರಣ ದೊಡ್ಡ ವರ್ಗಾವಣೆಗಳು ನಡೆಯುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ ಹಿಂದಿನ ಐಪಿಎಲ್ ಋತುವಿನಲ್ಲಿ ಹೆಚ್ಚು ಕೊಡುಗೆ ನೀಡದ ಕೆಲವು ಆಟಗಾರರನ್ನು ಬದಲಿಸುವ ಸಾಧ್ಯತೆಗಳಿವೆ.
ಬಿಸಿಸಿಐ ಡಿಸೆಂಬರ್ 9ರಂದು ಮಹಿಳೆಯರ ಪ್ರೀಮಿಯರ್ ಲೀಗ್ನ 2024 ರ ಹರಾಜು ನಡೆಸಬಹುದು ಎಂದು ವರದಿ ಸೂಚಿಸಿದೆ. ಡಬ್ಲ್ಯುಪಿಎಲ್ ಹರಾಜಿನ ಸ್ಥಳವನ್ನು ಅಂತಿಮಗೊಳಿಸಲಾಗಿಲ್ಲವಾದರೂ ಅದು ಭಾರತದಲ್ಲೇ ನಡೆಯಬಹುದು.
ಇದನ್ನೂ ಓದಿ : Wasim Akram: ಪಾಂಡ್ಯ ಇಲ್ಲದಿದ್ದರೂ ಭಾರತ ಬಲಿಷ್ಠ; ಶಮಿಗೆ ಇನ್ನು ಸ್ಥಾನ ಖಚಿತ ಎಂದ ಪಾಕ್ ಮಾಜಿ ವೇಗಿ
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನ ಸ್ಥಳ ಮತ್ತು ದಿನಾಂಕಗಳನ್ನು ಬಿಸಿಸಿಐ ಇನ್ನೂ ಮಾಲೀಕರಿಗೆ ಬಹಿರಂಗಪಡಿಸಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಲೀಗ್ ನಡೆಸುವ ಸಲಹೆ ಇದೆ. ಭಾರತೀಯ ಮಹಿಳಾ ತಂಡವು ಜನವರಿ ಮಧ್ಯದವರೆಗೆ ಸಾಗರೋತ್ತರ ಟೂರ್ನಿಗಳನ್ನು ಹೊಂದಿದೆ.
ಕಳೆದ ವರ್ಷ ಇಡೀ ಲೀಗ್ ಮುಂಬೈನಲ್ಲಿ ನಡೆದಾಗ ನಡೆದಂತೆ ಡಬ್ಲ್ಯುಪಿಎಲ್ ಅನ್ನು ಒಂದೇ ನಗರದಲ್ಲಿ ನಡೆಸಲಾಗುತ್ತದೆಯೇ ಅಥವಾ ಈ ಬಾರಿ ಅನೇಕ ನಗರಗಳಲ್ಲಿ ನಡೆಸಲಾಗುತ್ತದೆಯೇ ಎಂಬ ಬಗ್ಗೆ ತಂಡಗಳು ದೃಢೀಕರಣವನ್ನು ಪಡೆದಿಲ್ಲ.
ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ(Indian women’s cricket team) ಕೋಚ್ ಆಗಿ ದೇಶೀಯ ಕ್ರಿಕೆಟ್ನ ಮಾಜಿ ಆಟಗಾರ ಅಮೋಲ್ ಮಜುಂದಾರ್(Amol Muzumdar) ಅವರನ್ನು ನೇಮಕ ಮಾಡಲಾಗಿದೆ. ಈ ವಿಚಾರವನ್ನು ಬಿಸಿಸಿಐ(BCCI) ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಕೆಲವು ತಿಂಗಳ ಹಿಂದೆ ಮುಖ್ಯ ಕೋಚ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶಿಸಿತ್ತು. ಈ ಹುದ್ದೆಗೆ ಮಜುಂದಾರ್ ಅವರನ್ನು ಆಯ್ಕೆ ಮಾಡಲಾಗಿತ್ತಾದರೂ ನೇಮಕಾತಿಗೆ ಧೀರ್ಘ ಕಾಲ ತೆಗೆದುಕೊಳ್ಳಲಾಗಿತ್ತು. ಸಂಪೂರ್ಣ ಸಮಾಲೋಚನೆ ನಂತರ ಮೂವರು ಸದಸ್ಯರ ಸಮಿತಿಯು ಮಜುಂದಾರ್ ಅವರನ್ನು ಹುದ್ದೆ ವಹಿಸಿಕೊಳ್ಳುವಂತೆ ಸರ್ವಾನುಮತದಿಂದ ಶಿಫಾರಸು ಮಾಡಿದೆ.
ರಮೇಶ್ ಪವಾರ್ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿ ಬೆಂಗಳೂರು ಕೇಂದ್ರಕ್ಕೆ ಸ್ಥಳಾಂತರಗೊಂಡ ನಂತರ ಭಾರತದ ಮಾಜಿ ಬ್ಯಾಟರ್ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಸಿಬ್ಬಂದಿ ಹೃಷಿಕೇಶ್ ಕಾನಿಟ್ಕರ್ ಅವರು ತಂಡದ ಹಂಗಾಮಿ ಮುಖ್ಯ ಕೋಚ್ ಹೊಣೆ ಹೊತ್ತಿದ್ದರು. ಈಗ ಸಂಪೂರ್ಣವಾಗಿ ಮಜುಂದಾರ್ ಅವರು ಕೋಚ್ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.