ಮುಂಬೈ: ಇಲ್ಲಿನ ವಿಶ್ವ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ರಾತ್ರಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಐಪಿಎಲ್ 2024 (IPL 2024 ) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ ನಿಯಮಗಳನ್ನು ಮೀರಿದ ಹಿನ್ನೆಲೆಯಲ್ಲಿ ಭಾರಿ ಮೊತ್ತದ ದಂಡ ಪಾವತಿ ಮಾಡಬೇಕಾಗಿದೆ. ಜತೆಗೆ ಅವರಿಗೆ ನಿಷೇಧವನ್ನೂ ಹೇರಿದೆ. ಪಂದ್ಯದಲ್ಲಿ ಅವರ ನೇತೃತ್ವದ ತಂಡವು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿತ್ತು. ಹೀಗಾಗಿ ಬಿಸಿಸಿಐ 30 ಲಕ್ಷ ರೂ.ಗಳ ದಂಡ ವಿಧಿಸಿದೆ. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೂರನೇ ಅಪರಾಧವಾಗಿದೆ. ಹೀಗಾಗಿ ಪಾಂಡ್ಯಗೆ 30 ಲಕ್ಷ ರೂ.ಗಳ ದಂಡ ವಿಧಿಸಲಾಯಿತು ಮತ್ತು ತಂಡದ ಮುಂದಿನ ಪಂದ್ಯವನ್ನು ಆಡದಂತೆ ನಿಷೇಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ ಇಲೆವೆನ್ನ ಉಳಿದ ಸದಸ್ಯರಿಗೆ ತಲಾ 12 ಲಕ್ಷ ರೂ.ಗಳ ದಂಡ ಅಥವಾ ಆಯಾ ಪಂದ್ಯದ ಶುಲ್ಕದ 50 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ. ಮುಂಬೈ ತಂಡದ ಐಪಿಎಲ್ 2024ರ ಅಭಿಯಾನ ಮುಕ್ತಾಯಗೊಂಡಿದೆ. ಹೀಗಾಗಿ ಅವರ ಬ್ಯಾನ್ ಯಾವ ರೀತಿಯಲ್ಲಿ ಪರಿಣಾಮಕಾರಿ ಎಂಬುದು ಅಸ್ಪಷ್ಟ.
ನಿಕೋಲಸ್ ಪೂರನ್ (28 ಎಸೆತಗಳಲ್ಲಿ 75 ರನ್) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ 45 ನಿಮಿಷಗಳ ಮಳೆ ವಿರಾಮದ ನಡುವೆ ಮುಂಬೈ ಇಂಡಿಯನ್ಸ್ ವಿರುದ್ಧ 18 ರರನ್ಗಳ ಭರ್ಜರಿ ಜಯ ದಾಖಲಿಸಿದೆ. ಪೂರನ್ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅವರು 8 ಸಿಕ್ಸರ್ ಬಾರಿಸುವ ಮೂಲಕ ಐಪಿಎಲ್ 2024 ರಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದವರು (36) ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮುಂಬೈ ಇಂಡಿಯನ್ಸ್ 14 ಪಂದ್ಯಗಳಿಂದ 8 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಎಲ್ಎಸ್ಜಿ 14 ಅಂಕಗಳೊಂದಿಗೆ ಅಭಿಯಾನ ಮುಗಿಸಿತು.
ಪಂದ್ಯದ ವಿವರ ಈ ಕೆಳಗೆ ಇದೆ
ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿದ್ದ ಮುಂಬೈ ಇಂಡಿಯನ್ಸ್ ತಂಡದ ಯೋಜನೆ ಸಂಪೂರ್ಣವಾಗಿ ಬುಡಮೇಲಾಗಿದೆ. ಹೀಗಾಗಿ ಐಪಿಎಲ್ 17ನೇ ಆವೃತ್ತಿಯ (IPL 2024) 14 ಪಂದ್ಯಗಳಲ್ಲಿ 10 ಸೋಲು ಮತ್ತು ಕೇವಲ 4 ಗೆಲುವಿನೊಂದಿಗೆ 8 ಅಂಕಗಳೊಂದಿಗೆ ಅಭಿಯಾನ ಮುಗಿಸಿದೆ. ತವರಿನಲ್ಲಿ ನಡೆದ ಕೊನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿಯೂ 18 ರನ್ಗಳ ಸೋಲಿಗೆ ಒಳಗಾಗಿದೆ. ಎರಡೂ ತಂಡಗಳಿಗೆ ಇದು ಕೊನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಗೆದ್ದಿರುವ ಲಕ್ನೊ ಸೂಪರ್ ಜೈಂಟ್ಸ್ ತಂಡ ಒಟ್ಟು 7 ಗೆಲುವಿನೊಂದಿಗೆ 14 ಅಂಕಗಳ ಸಮೇತ ಏಳನೇ ಸ್ಥಾನ ಪಡೆದುಕೊಂಡಿದೆ. ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್ಗಳು ಮತ್ತೊಂದು ಬಾರಿ ತಮ್ಮ ಅಸಮರ್ಥತೆಯನ್ನು ಪ್ರದರ್ಶಿಸಿ ಅತ್ಯಂತ ನಿರಾಶಾದಾಯಕ ಸೀಸನ್ ಅನ್ನು ಎದುರಿಸಿದರು.
ಇದನ್ನೂ ಓದಿ: IPL 2024 : ಆರ್ಸಿಬಿ- ಚೆನ್ನೈ ಪಂದ್ಯದ ವೇಳೆ ಮಳೆ ಬಂದು ರದ್ದಾದರೆ ಮುಂದೇನಾಗುವುದು?
ಇಲ್ಲಿನ ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಚೇಸಿಂಗ್ ಸುಲಭ ಎಂಬ ಯೋಜನೆಯೊಂದಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿ ಮುಂಬೈ ತನ್ನೆಲ್ಲ ಓವರ್ಗಳು ಮುಕ್ತಾಯಗೊಂಡಾಗ 6 ವಿಕೆಟ್ ನಷ್ಟಕ್ಕೆ 196 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಚೇಸಿಂಗ್ ಸುಲಭ ಎಂದುಕೊಂಡಿದ್ದ ಮುಂಬೈ ತಂಡಕ್ಕೆ ಮಧ್ಯದಲ್ಲಿ ಸುರಿದ ಮಳೆ ಅಡಚಣೆ ಮಾಡಿತು. ಏಕಾಏಕಿ ವಾತಾವರಣ ತಂಪುಗೊಂಡ ಕಾರಣ ಇಬ್ಬನಿ ಪರಿಣಾಮವನ್ನು ಅನುಭವಿಸಿ ಸುಲಭವಾಗಿ ಸ್ಕೋರ್ ಬಾರಿಸಿ ಗೆಲ್ಲುವ ಯೋಜನೆ ವಿಫಲಗೊಂಡಿತು.
ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡ ಅದ್ಭುತ ಆರಂಭ ಪಡೆಯಿತು. ರೋಹಿತ್ ಶರ್ಮಾ 38 ಎಸೆತಕ್ಕೆ 6 ರನ್ ಬಾರಿಸಿ ಮಿಂಚಿದರು. ಡೀವಾಲ್ಡ್ ಬ್ರೇವಿಸ್ 23 ರನ್ ಹೊಡೆದರು. ಈ ಜೋಡಿ 8. 4 ಓವರ್ಗಳಲ್ಲಿ ಮೊದಲ ವಿಕೆಟ್ಗೆ 84 ರನ್ ಬಾರಿಸಿ ಗೆಲುವಿನ ನಿರೀಕ್ಷೆ ಹುಟ್ಟಿಸಿತು. ಆದರೆ, ಆ ಬಳಿಕ ಮುಂಬೈ ತಂಡ ಬ್ಯಾಟಿಂಗ್ ವೈಫಲ್ಯ ಪ್ರದರ್ಶನಗೊಂಡಿತು. ಸೂರ್ಯಕುಮಾರ್ ಶೂನ್ಯಕ್ಕೆ ಔಟಾದರೆ ಇಶಾನ್ ಕಿಶನ್ 14 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ ಕೊಡುಗೆ ಕೇವಲ 16 ರನ್. ನೆಹಲ್ ವದೇರಾ 1 ರನ್ಗೆ ಔಟಾಗುವ ಮೂಲಕ ಮುಂಬೈ ಆಸೆ ಕಮರಿತು. ಏತನ್ಮದ್ಯೆ ಮಧ್ಯಮ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಮನ್ ಧಿರ್ 28 ಎಸೆತಕ್ಎಕ 68 ರನ್ ಬಾರಿಸಿದರು. ಅದರೆ ಅವರಿಗೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ.