Site icon Vistara News

IPL 2024: ಐಪಿಎಲ್​ ತಂಡಗಳ ಬ್ರಾಂಡ್​ ಮೌಲ್ಯ ಏರಿಕೆ; ಆರ್​ಸಿಬಿಗೆ ಎಷ್ಟನೇ ಸ್ಥಾನ?

IPL 2024

ಮುಂಬಯಿ: ಮುಂದಿನ ವರ್ಷ ನಡೆಯುವ 17ನೇ ಆವೃತ್ತಿಯ ಐಪಿಎಲ್​ಗೆ(IPL 2024) ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ. ಆಟಗಾರರ ಮಿನಿ ಹರಾಜು ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ ಐಪಿಎಲ್​ನ ಬ್ರಾಂಡ್​ ಮೌಲ್ಯದ(IPL brand value) ವರದಿ ಹೊರಬಿದ್ದಿದೆ. 2023ರಲ್ಲಿ ಶೇ. 28 ಪ್ರಗತಿ ಕಂಡಿದ್ದು, 89,263 ಕೋಟಿ ರೂ. ತಲುಪಿದೆ ಎಂದು ವರದಿಯಾಗಿದೆ. ಜತೆಗೆ ತಂಡ ಬ್ರಾಂಡ್ ಮೌಲ್ಯದಲ್ಲಿಯೂ ಭಾರಿ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ.

ಐಪಿಎಲ್​ನ ಯಶಸ್ವಿ ತಂಡಗಳಲ್ಲಿ ಒಂದಾದ ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಗರಿಷ್ಠ ಮೌಲ್ಯ ಹೊಂದಿರುವ ತಂಡವಾಗಿ ಕಾಣಿಸಿಕೊಂಡಿದೆ. 725 ಕೋಟಿ ರೂ. (87 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯ ಹೊಂದಿದೆ. ಮುಂದಿನ ಆವೃತ್ತಿಗಾಗಿ ಮುಂಬೈ ಫ್ರಾಂಚೈಸಿ ಹಾರ್ದಿಕ್​ ಪಾಂಡ್ಯ ಅವರನ್ನು ಗುಜರಾತ್​ ತಂಡದಿಂದ ಟ್ರೇಡ್​ ಮಾಡಿ ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ಹೀಗಾಗಿ ಬಲಿಷ್ಠವಾಗಿರುವ ಮುಂಬೈ 6ನೇ ಕಿರೀಟ ಗೆಲ್ಲುವ ವಿಶ್ವಾಸದಲ್ಲಿದೆ.

ಬ್ರಾಂಡ್​ ಮೌಲ್ಯಮಾಪನ ಸಲಹಾ ಸಂಸ್ಥೆ “ಬ್ರಾಂಡ್​ ಫಿನಾನ್ಸ್​ ರಿವೀಲ್ಸ್​’ ಸಿದ್ಧಪಡಿಸಿರುವ ವರದಿಯ ಪ್ರಕಾರ, ಐಪಿಎಲ್​ ಬ್ರಾಂಡ್​ ಮೌಲ್ಯ 2008ರ ಆರಂಭಿಕ ವರ್ಷದಿಂದ ಈಗ ಶೇ. 433ರಷ್ಟು ಪ್ರಗತಿ ಕಂಡಿದೆ ಎಂದು ತಿಳಿಸಿದೆ. ಕಳೆದ ವರ್ಷ ಅಂದರೆ, 2022ರಲ್ಲಿ ಐಪಿಎಲ್​ 70,070 ಕೋಟಿ ರೂ. (8.4 ಬಿಲಿಯನ್​ ಡಾಲರ್​) ಬ್ರಾಂಡ್​ ಮೌಲ್ಯ ಹೊಂದಿತ್ತು.

ಇದನ್ನೂ ಓದಿ IPL 2024: ಯಾರಿಗೆ ಒಲಿಯಲಿದೆ ಐಪಿಎಲ್ ಟ್ರೋಫಿಯ​ ಶೀರ್ಷಿಕೆ ಪ್ರಾಯೋಜಕತ್ವ?

ಮಹೇಂದ್ರ ಸಿಂಗ್​ ಧೋನಿ ಸಾರಥ್ಯದ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​ ತಂಡ 675 ಕೋಟಿ ರೂ. (81 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯ ಹೊಂದಿದೆ. 2 ಬಾರಿಯ ಚಾಂಪಿಯನ್​ ಕೋಲ್ಕತಾ ನೈಟ್​ರೈಡರ್ಸ್​ 655 ಕೋಟಿ ರೂ. (78.6 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯದೊಂದಿಗೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದೆ.

ಆರ್​ಸಿಬಿಗೆ 4ನೇ ಸ್ಥಾನ

ಕನ್ನಡಿಗರ ನೆಚ್ಚಿನ ತಂಡದವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇದುವರೆ ಕಪ್​ ಗೆಲ್ಲದಿದ್ದರೂ ಬ್ರಾಂಡ್​ ಮೌಲ್ಯದಲ್ಲಿ ಮಾತ್ರ ತನ್ನ ಹವಾ ಇಟ್ಟಿದೆ. ಆರ್​ಸಿಬಿ ತಂಡ 582 ಕೋಟಿ ರೂ. (69.8 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯದೊಂದಿಗೆ 4ನೇ ಸ್ಥಾನದಲ್ಲಿದೆ.

2022ರಲ್ಲಿ ಚೊಚ್ಚಲ ಬಾರಿ ಐಪಿಎಲ್​ ಪ್ರವೇಶಿಸಿದ ಗುಜರಾತ್​ ಟೈಟಾನ್ಸ್​ ತಂಡ ಆ ಆವೃತ್ತಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಇದೇ ವರ್ಷ ನಡೆದಿದ್ದ ಆವೃತ್ತಿಯಲ್ಲಿ ಚೆನ್ನೈ ವಿರುದ್ಧ ಸೋತು ರನ್ನರ್​ ಅಪ್​ ಸ್ಥಾನ ಪಡೆದಿತ್ತು. ಈ ಸಾಧನೆಯಿಂದಾಗಿ ತಂಡದ ಬ್ರಾಂಡ್​ ಮೌಲ್ಯ ಕೂಡ ಏರಿಕೆ ಕಂಡಿದೆ. ಶೇ. 38 ಪ್ರಗತಿ ಕಂಡು 545 ಕೋಟಿ ರೂ. (65.4 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯದೊಂದಿಗೆ 5ನೇ ಸ್ಥಾನಕ್ಕೇರಿದೆ. ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ಜೈಂಟ್ಸ್​ ತಂಡ ಶೇ. 48 ಪ್ರಗತಿ ಸಾಧಿಸಿ 392 ಕೋಟಿ ರೂ. (47 ದಶಲಕ್ಷ ಡಾಲರ್​) ಬ್ರಾಂಡ್​ ಮೌಲ್ಯದೊಂದಿಗೆ 9ನೇ ಸ್ಥಾನದಲ್ಲಿದೆ. ಪಂಜಾಬ್​ ಕಿಂಗ್ಸ್​ ತಂಡ 377 ಕೋಟಿ ರೂ. ಬ್ರಾಂಡ್​ ಮೌಲ್ಯದೊಂದಿಗೆ ಕೊನೆಯ 10ನೇ ಸ್ಥಾನದಲ್ಲಿದೆ.

ಐಪಿಎಲ್​ ತಂಡಗಳ ಬ್ರಾಂಡ್​ ಮೌಲ್ಯ

ಮುಂಬೈ ಇಂಡಿಯನ್ಸ್​: 725 ಕೋಟಿ ರೂ.

ಚೆನ್ನೈ ಸೂಪರ್​ಕಿಂಗ್ಸ್​: 675 ಕೋಟಿ ರೂ.

ಕೋಲ್ಕತಾ ನೈಟ್​ರೈಡರ್ಸ್​: 655 ಕೋಟಿ ರೂ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು: 582 ಕೋಟಿ ರೂ.

ಗುಜರಾತ್​ ಟೈಟಾನ್ಸ್​: 545 ಕೋಟಿ ರೂ.

ಡೆಲ್ಲಿ ಕ್ಯಾಪಿಟಲ್ಸ್​: 534 ಕೋಟಿ ರೂ.

ರಾಜಸ್ಥಾನ ರಾಯಲ್ಸ್​: 521 ಕೋಟಿ ರೂ.

ಸನ್​ರೈಸರ್ಸ್​ ಹೈದರಾಬಾದ್​: 402 ಕೋಟಿ ರೂ.

ಲಖನೌ ಸೂಪರ್​ಜೈಂಟ್ಸ್​: 392 ಕೋಟಿ ರೂ.

ಪಂಜಾಬ್​ ಕಿಂಗ್ಸ್​: 377 ಕೋಟಿ ರೂ.

Exit mobile version