ಅಹಮದಾಬಾದ್: ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಉಗ್ರರಿಂದ ಭಯೋತ್ಪಾದಕ ದಾಳಿಯ ಎಚ್ಚರಿಕೆ ಬಂದಿತ್ತು. ಇದೀಗ ಐಪಿಎಲ್(IPL 2024)ಟೂರ್ನಿಗೂ ಐಸಿಸ್ ಉಗ್ರರ ಕಾಟವೊಂದು ಎದುರಾದಂತಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಒಂದು ದಿನ ಮೊದಲೇ ನಾಲ್ವರು ಐಸಿಸ್ ಉಗ್ರರನ್ನು (ISIS Terrorists) ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು (ATS) ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ಬಂಧಿಸಿದ್ದಾರೆ. ಹೀಗಾಗಿ ನಾಳೆ(ಮಂಗಳವಾರ) ನಡೆಯುವ ಕ್ವಾಲಿಫೈಯರ್ ಮತ್ತು ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯಕ್ಕೆ ಭಾರೀ ಭದ್ರತೆ ಮತ್ತು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಂಧಿತ ನಾಲ್ವರು ಉಗ್ರರನ್ನು ಶ್ರೀಲಂಕಾ ಮೂಲದವರೆಂದು ಗುರುತಿಸಲಾಗಿದೆ. ನಾಲ್ವರೂ ಉಗ್ರರು ವಿಮಾನ ನಿಲ್ದಾಣದಲ್ಲಿ ತಮ್ಮ ಹ್ಯಾಂಡ್ಲರ್‌ಗಾಗಿ ಕಾಯುತ್ತಿರುವಾಗ ಅವರನ್ನು ಬಂಧಿಸಲಾಗಿದೆ. ನಾಲ್ವರನ್ನೂ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ನಾಲ್ವರೂ ಉಗ್ರರು ವಿಮಾನ ನಿಲ್ದಾಣದಲ್ಲಿ ಏನು ಮಾಡುತ್ತಿದ್ದರು? ಅವರು ರೂಪಿಸಿದ ಸಂಚೇನು? ಎಲ್ಲಿಗೆ ಹೋಗುವವರಿದ್ದರು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮೋದಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್‌ನ ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್ ಪಂದ್ಯದ ವೇಳೆ ಬಾಂಬ್ ಸ್ಫೋಟ ಮಾಡುವುದು ಇವರ ಉದ್ದೇಶವಾಗಿತ್ತೇ ಎನ್ನುವುದು ಕೂಡ ಇಲ್ಲಿ ಭಯ ಹುಟ್ಟಿಸುವಂತೆ ಮಾಡಿದೆ.
ಈಗಾಗಲೇ ಆಟಗಾರರು ತಂಗಿರುವ ಹೋಟೆಲ್ಗಳಿಗೂ ಮತ್ತು ಆಟಗಾರರು ಅಭ್ಯಾಸಕ್ಕೆ ಸಂಚರಿಸುವ ಬಸ್ಗಳಿಗೂ ಅಹಮದಾಬಾದ್ ಪೊಲೀಸರು ಭಾರೀ ಭದ್ರತೆ ಕಲ್ಪಿಸಿದ್ದಾರೆ. ಸ್ಟೇಡಿಯಂ ಸುತ್ತಮುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಲ್ಲ ವಾಹನಗಳನ್ನು ತಪಾಸಣೆ ನಡೆಸುವುದು ಮತ್ತು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IPL 2024: ಪ್ಲೇ ಆಫ್ ಪಂದ್ಯಗಳಿಗೆ ಮೀಸಲು ದಿನ ಇದೆಯೇ? ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?
ಮೊದಲ ಕ್ವಾಲಿಫೈಯರ್ ಪಂದ್ಯ ಮಂಗಳವಾರ (ಮೇ 21) ಅಹಮದಾಬಾದ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಬುಧವಾರ (ಮೇ 22) ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.
ಮೇ 12ರಂದು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಒಡ್ಡಲಾಗಿತ್ತು. ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಒಡ್ಡಲಾಗಿತ್ತು. ಬೆದರಿಕೆಯ ಮೇಲ್ ಬರುತ್ತಲೇ ಭದ್ರತಾ ಸಿಬ್ಬಂದಿಯು ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿತ್ತು. ಇಡೀ ವಿಮಾನ ನಿಲ್ದಾನದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು, ವಸ್ತುಗಳಿಗಾಗಿ ಇನ್ನಿಲ್ಲದಂತೆ ಪರಿಶೀಲನೆ ನಡೆಸಲಾಗಿತ್ತು.