ಚೆನ್ನೈ: ಮನುಷ್ಯನ ಜೀವನದಲ್ಲಿ ವಿವಾಹವು ಒಂದು ವಿಶೇಷ ಸಂದರ್ಭ. ಈ ಸಂದರ್ಭವನ್ನು ಅತ್ಯಂತ ಸಂಭ್ರಮದಿಂದ ಕಳೆಯಲು ಎಲ್ಲರೂ ಬಯಸುತ್ತಾರೆ. ಇನ್ನೂ ಕೆಲವರು ಅದನ್ನು ಇನ್ನಷ್ಟು ವಿಶೇಷವಾಗಿ ಅಥವಾ ಆಕರ್ಷಣೀಯವಾಗಿ ಮಾಡುತ್ತಾರೆ. ಅಂತೆಯೇ ತಮಿಳುನಾಡಿನ ಕ್ರಿಕೆಟ್ ಪ್ರೇಮಿ ದಂಪತಿಗಳು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಥೀಮ್ ಬಣ್ಣಗಳನ್ನು ಬಳಸಿಕೊಂಡು ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿಸಿ ಸುದ್ದಿಯಾಗಿದ್ದಾರೆ. ಐಪಿಎಲ್ (IPL 2024) ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದು ಬಹುವಾಗಿ ಗಮನ ಸೆಳೆದಿದೆ. ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು, ಸಿಎಸ್ಕೆ ಲೋಗೋದೊಳಗೆ ವಧು ಮತ್ತು ವರನ ಹೆಸರುಗಳನ್ನು ಹಾಕಲಾಗಿದೆ.
ಆಹ್ವಾನವನ್ನು ಐಪಿಎಲ್ ಟಿಕೆಟ್ ರೂಪದಲ್ಲಿ ರಚಿಸಲಾಗಿದೆ. ಮ್ಯಾಚ್ ಪ್ರಿವ್ಯೂ” ಮತ್ತು “ಮ್ಯಾಚ್ ಪ್ರೆ ಡಿಕ್ಷನ್” ನಂತಹ ಪದಗಳ ಬಳಕೆ ಮಾಡಲಾಗಿದ್ದು ಆಮಂತ್ರಣ ಪತ್ರಿಕೆ ಸಂಪೂರ್ಣವಾಗಿ ಐಪಿಎಲ್ನಿಂದ ಪ್ರೇರಿತವಾಗಿದೆ. ಮದುವೆ ಆಮಂತ್ರಣ ಪತ್ರಿಕೆಯ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದ್ದು, 10 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 60,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಫೋಟೋದಲ್ಲಿ ದಂಪತಿಗಳಾದ ಗಿಫ್ಟ್ಲೀನ್ ಪರ್ಸಿ ಮತ್ತು ಮಾರ್ಟಿನ್ ರಾಬರ್ಟ್ ಗೆ ಶುಭಾಶಯ ತಿಳಿಸಲಾಗಿದೆ. ಇದು ಅದ್ಭುತ ಜತೆಯಾಟ ಎಂದು ಕೆಲವು ಕಾಮೆಂಟ್ ಬರೆದಿದ್ದಾರೆ. ಈ ಪೋಸ್ಟ್ನಲ್ಲಿ ನವವಿವಾಹಿತರು ತಮ್ಮ ಚಿತ್ರಗಳನ್ನು ಒಳಗೊಂಡ ಟ್ರೋಫಿಯಂತಹ ಕಟ್-ಔಟ್ ಪೋಸ್ಟರ್ಗಳನ್ನು ನೀಡಿದ್ದಾರೆ. ಬಳಕೆದಾರರು ದಂಪತಿಗಳನ್ನು ಅಭಿನಂದಿಸಿದ್ದಾರೆ ಮತ್ತು ಅವರಿಗೆ ಯಶಸ್ವಿ ಜೀವನಕ್ಕಾಗಿ ಹಾರೈಸಿದ್ದಾರೆ.
ಇದನ್ನೂ ಓದಿ: Kodagu News: ಕೊಡಗು ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
“ಸುಂದರ ಜತೆಯಾಟ ಮತ್ತು ಇನ್ನಿಂಗ್ಸ್ಗಾಗಿ ಹೆಚ್ಚಿನ ಅಭಿನಂದನೆಗಳು” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಆಮಂತ್ರಣದ ಎಡಭಾಗದಲ್ಲಿರುವ ಆ ಪೈವ್ ಸ್ಟಾರ್” ಎಂದು ಇನ್ನೊಬ್ಬರು ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 22 ರಂದು ಪ್ರಾರಂಭವಾಗಿ ಮೇ 26 ರವರೆಗೆ ನಡೆಯುತ್ತದೆ. 17ನೇ ಆವೃತ್ತಿಯ ಟಿ20 ಟೂರ್ನಿ ಭಾರತದ 13 ನಗರಗಳಲ್ಲಿ ನಡೆಯುತ್ತಿದ್ದು, 10 ತಂಡಗಳು 74 ಪಂದ್ಯಗಳಲ್ಲಿ ಸ್ಪರ್ಧಿಸುತ್ತಿವೆ.
ಕಳೆದ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಐದನೇ ಬಾರಿಗೆ ಪ್ರಶಸ್ತಿ ಗೆದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಜೊತೆಗೆ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫ್ರಾಂಚೈಸಿ ಎಂಬ ಖ್ಯಾತಿ ಪಡೆದುಕೊಂಡಿದೆ.