Site icon Vistara News

IPL 2024 : ಗೆಲ್ಲಬೇಕಾಗಿರುವುದು ಐಪಿಎಲ್​ ಟ್ರೋಫಿ, ಆರೆಂಜ್ ಕ್ಯಾಪ್ ಅಲ್ಲ; ಅನಗತ್ಯವಾಗಿ ಕೊಹ್ಲಿಯ ಕಾಲೆಳೆದ ಅಂಬಾಟಿ ರಾಯುಡು

IPL 2024

ಬೆಂಗಳೂರು: ಐಪಿಎಲ್ 17ನೇ ಆವೃತ್ತಿಯ ಫೈನಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಎಂಟು ವಿಕೆಟ್​ಗಳ ಜಯ ಸಾಧಿಸಿ ಟ್ರೋಫಿ ಗೆದ್ದುಕೊಂಡಿತು. ಕೆಕೆಆರ್​ ಬಳಗಕ್ಕೆ ಇದು ಒಟ್ಟು ಮೂರನೇ ಟ್ರೋಫಿ. ಹೀಗಾಗಿ ಎಲ್ಲರ ಗಮನ ಕೆಕೆಆರ್ ತಂಡದ ಮೇಲೆ ನೆಟ್ಟಿತ್ತು. ಎಲ್ಲರೂ ಆ ತಂಡದ ಅಟಗಾರರ ಮತ್ತು ಒಟ್ಟು ಪ್ರದರ್ಶನದ ಮೇಲೆ ಬೆಳಕು ಚೆಲ್ಲುತ್ತಿದ್ದರು. ಆದರೆ, ಭಾರತೀಯ ಕ್ರಿಕೆಟ್​ ಕ್ಷೇತ್ರ ಕಂಡ ಅತ್ಯಂತ ತರ್ಲೆ ಹಾಗೂ ಅಧಿಕಪ್ರಸಂಗಿ ಕ್ರಿಕೆಟಿಗ ಅಂಬಾಟಿ ರಾಯುಡು ಮಾತ್ರ ಅನಗತ್ಯವಾಗಿ ಕೊಹ್ಲಿ ಹಾಗೂ ಆರ್​ಸಿಬಿ ವಿಚಾರಕ್ಕೆ ಮೂಗು ತೂರಿಸಿದರು. ಅವರು ಪ್ರಶಸ್ತಿ ಗೆಲುವಿನ ಅಭಿಯಾನದಲ್ಲಿ ಕೆಕೆಆರ್​ ಆಟಗಾರರ ಕೊಡುಗೆಯ ಬಗ್ಗೆ ಮಾತನಾಡುವ ಬದಲು ಕೊಹ್ಲಿಯ ಕಾಲೆಳೆಯಲು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟರು. ಇದು ಕೊಹ್ಲಿಯ ಅಭಿಮಾನಿಗಳನ್ನು ಕೆರಳಿಸದೇ ಇರದು.

ಟೂರ್ನಿಯಲ್ಲಿ ಸುನಿಲ್ ನರೈನ್ ಕೆಕೆಆರ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರ ಹೆಸರಿನಲ್ಲಿ 15 ಪಂದ್ಯಗಳಲ್ಲಿ 488 ರನ್ ಗಳಿವೆ. ಫಿಲ್ ಸಾಲ್ಟ್ 435 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ ಮತ್ತು ಶ್ರೇಯಸ್ ಅಯ್ಯರ್ ಕ್ರಮವಾಗಿ 370 ಮತ್ತು 354 ರನ್ ಗಳಿಸಿದರು. ಪಂದ್ಯಾವಳಿಯನ್ನು ಗೆಲ್ಲಲು, ತಂಡವು ಒಬ್ಬ ವ್ಯಕ್ತಿಯನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದು ರಾಯುಡು ಹೇಳಿದರು. ಇದನ್ನು ವಿವರಿಸುವಾಗ, ರಾಯುಡು ಅಂತಿಮವಾಗಿ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯನ್ನು ತರಾಟೆಗೆ ತೆಗೆದುಕೊಂಡರು. ಆರೆಂಜ್ ಕ್ಯಾಪ್ ಗೆದ್ದರೆ ಸಾಲದು. ಫ್ರಾಂಚೈಸಿಗೆ ಐಪಿಎಲ್ ಟ್ರೋಫಿ ಗೆಲ್ಲಬೇಕು ಎಂದು ಹೇಳಿದರು. ಕೊಹ್ಲಿ ಈ ವಿಚಾರದಲ್ಲಿ 17 ವರ್ಷಗಳಿಂದ ಸತತವಾಗಿ ಪ್ರಯತ್ನ ಮಾಡುತ್ತಿದ್ದರೂ ಉಳಿದ ಆಟಗಾರರಿಂದ ಅವರಿಗೆ ಹೆಚ್ಚಿನ ಬೆಂಬಲ ದೊರೆಯದ ಕಾರಣ ಟ್ರೋಫಿ ಸಿಕ್ಕಿಲ್ಲ ಎಂಬುದೇ ಬೇಸರ.

“ನರೈನ್, ರಸೆಲ್ ಮತ್ತು ಸ್ಟಾರ್ಕ್ ಅವರಂತಹ ದಿಗ್ಗಜರ ಪರವಾಗಿ ನಿಂತಿದ್ದಕ್ಕಾಗಿ ಮತ್ತು ತಂಡದ ಗೆಲುವಿನಲ್ಲಿ ತಮ್ಮ ಕೊಡುಗೆ ನೀಡಿದ ಕೆಕೆಆರ್ ತಂಡಕ್ಕೆ ಅಭಿನಂದನೆಗಳು. ಒಂದು ತಂಡವು ಐಪಿಎಲ್ ಅನ್ನು ಗೆಲ್ಲುವುದು ಹೀಗೆ. ನಾವು ಇದನ್ನು ಹಲವು ವರ್ಷಗಳಿಂದ ನೋಡಿದ್ದೇವೆ. ಆಟಗಾರ ಗೆಲ್ಲಬೇಕಾಗಿರುವುದು ಐಪಿಎಲ್ ಟ್ರೋಫಿ. ಆರೆಂಜ್ ಕ್ಯಾಪ್ ಅಲ್ಲ. ತಲಾ 300 ರನ್​ಗಳ ಕೊಡುಗೆಗಳು (ಅನೇಕ ಆಟಗಾರರ) ಟ್ರೋಫಿ ತಂದುಕೊಡುತ್ತದೆ “ಎಂದು ರಾಯುಡು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ಹೇಳಿದರು.

ಐಪಿಎಲ್​ 2024ಲ್ಲಿ ವಿರಾಟ್ ಕೊಹ್ಲಿ 741 ರನ್ ಗಳಿಸಿದ್ದರಿಂದಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024 ರ ಪ್ಲೇಆಫ್ಗೆ ಅರ್ಹತೆ ಪಡೆಯಿತು ಎಂಬುದನ್ನು ಬಹುತೇಕ ಕ್ರಿಕೆಟ್ ವಿಮರ್ಶಕರು ಮರೆಯುತ್ತಾರೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ತನ್ನ ಅಂತಿಮ ಲೀಗ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತ್ತು. ಸತತವಾಗಿ ಆರು ಪಂದ್ಯಗಳನ್ನು ಗೆದ್ದಿತ್ತು. ಒಂದು ಹಂತದಲ್ಲಿ 10ನೇ ಸ್ಥಾನದಲ್ಲಿದ್ದ ತಂಡ ನಾಲ್ಕನೇ ಸ್ಥಾನಕ್ಕೇರಿತು. ಎಲ್ಲ ಆಟಗಾರರು ವಿಫಲವಾದಾಗ ತಂಡದ ಪರವಾಗಿದ್ದ ಭರವಸೆ ಕೊಹ್ಲಿಮಾತ್ರ. ಆದರೆ ಅಂಬಾಡಿ ಸೇರಿದಂತೆ ಎಲ್ಲರೂ ಕೊಹ್ಲಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಅಂಬಾಟಿಯ ಹೊಟ್ಟೆ ಉರಿಗೆ ಕಾರಣ, ಲೀಗ್ ಹಂತದ ಕೊನೇ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಆರ್​ಸಿಬಿ ಸೋಲಿಸಿದ್ದು ಎಂಬುದು ವಾಸ್ತವ.

ಇದನ್ನೂ ಓದಿ: IPL 2024 : ಕೆಕೆಆರ್​ ಗೆದ್ದ ಸಂಭ್ರಮದಲ್ಲಿ ಕೋಚ್ ಗಂಭೀರ್​ ಹಣೆಗೆ ಮುತ್ತಿಟ್ಟ ಶಾರುಖ್​ ಖಾನ್​

ಮ್ಯಾನೇಜ್​ಮೆಂಟ್​ನಲ್ಲಿ ಕುಳಿತಿರುವ ವ್ಯಕ್ತಿಗಳು ಮತ್ತು ಆಟಗಾರರು ಫ್ರಾಂಚೈಸಿಗಿಂತ ತಮ್ಮನ್ನು ತಾವು ಮೊದಲ ಸ್ಥಾನದಲ್ಲಿರಿಸುತ್ತಾರೆ. ಆರ್​ಸಿಬಿ ಟ್ರೋಫಿ ಗೆಲ್ಲದೇ ಇರಲು ಅದುವೇ ಕಾರಣ ಎಂದು ಅಂಬಾಟಿ ಹೇಳಿದ್ದಾರೆ.

“ಹಲವು ವರ್ಷಗಳಿಂದ ತಂಡವನ್ನು ಉತ್ಸಾಹದಿಂದ ಬೆಂಬಲಿಸಿದ ಎಲ್ಲಾ ಆರ್​ಸಿಬಿ ಬೆಂಬಲಿಗರಿಗೆ ನನ್ನ ಹೃದಯ ನಿಜವಾಗಿಯೂ ಮಿಡಿಯುತ್ತದೆ. ಮ್ಯಾನೇಜ್ಮೆಂಟ್ ಮತ್ತು ನಾಯಕರು ವೈಯಕ್ತಿಕ ಮೈಲಿಗಲ್ಲುಗಳಷ್ಟು ತಂಡ ಹಿತಾಸಕ್ತಿಗಳನ್ನು ಹೊಂದಿಲ್ಲ. ಹಾಗಿದ್ದೆರ ಆರ್ಸಿಬಿ ಅನೇಕ ಪ್ರಶಸ್ತಿಗಳನ್ನು ಗೆಲ್ಲುತ್ತಿತ್ತು. ಎಷ್ಟು ಅದ್ಭುತ ಆಟಗಾರರನ್ನು ಕೈಬಿಡಲಾಗಿದೆ ಎಂಬುದನ್ನು ನೆನಪಿಡಿ. ತಂಡಗಳ ಹಿತಾಸಕ್ತಿಗಳಿಗೆ ಮೊದಲ ಸ್ಥಾನ ನೀಡುವ ಆಟಗಾರರನ್ನು ಕರೆತರುವಂತೆ ನಿಮ್ಮ ಮ್ಯಾನೇಜ್ ಮೆಂಟ್ ಅನ್ನು ಒತ್ತಾಯಿಸಿ. ಮೆಗಾ ಹರಾಜಿನಿಂದ ದೊಡ್ಡ ಹೊಸ ಅಧ್ಯಾಯ ಪ್ರಾರಂಭವಾಗಬಹುದು, “ಎಂದು ರಾಯುಡು ಒಂದು ವಾರದ ಹಿಂದೆ ಟ್ವೀಟ್ ಮಾಡಿದ್ದರು.

Exit mobile version