Site icon Vistara News

IPL 2024: ಕ್ಯಾಚ್​ ಬಿಟ್ಟ ಹೂಡಾಗೆ ಬೆಸ್ಟ್​ ಫೀಲ್ಡರ್ ಅವಾರ್ಡ್​​; ಇದರ ಹಿಂದಿದೆ ಬಲವಾದ ಕಾರಣ

IPL 2024

ಲಕ್ನೋ: ಎಲ್ಲ ತಂಡದ ಕೋಚ್​ಗಳು ಪಂದ್ಯವೊಂದರಲ್ಲಿ ಉತ್ತಮವಾಗಿ ಬ್ಯಾಟಿಂಗ್​, ಬೌಲಿಂಗ್​ ಮತ್ತು ಫೀಲ್ಡಿಂಗ್​ ನಡೆಸಿದರೆ ಅಂತಹ ಆಟಗಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಶ್ಲಾಘಿಸುವುದು ವಾಡಿಕೆ. ಆದರೆ, ಲಕ್ನೋ ತಂಡ ಫೀಲ್ಡಿಂಗ್​ ಕೋಚ್​ ಜಾಂಟಿ ರೋಡ್ಸ್‌(Jonty Rhodes) ಅವರು ಕ್ಯಾಚ್​ ಕೈಚೆಲ್ಲಿದ ದೀಪಕ್​ ಹೂಡಾಗೆ(Deepak Hooda) ಮೆಚ್ಚುಗೆ ಜತೆಗೆ ಬೆಸ್ಟ್​ ಫೀಲ್ಡರ್​ ಅವಾರ್ಡ್ ನೀಡಿ(IPL 2024) ಗೌರವಿಸಿದ್ದಾರೆ. ಹೌದು, ಇದಕ್ಕೆ ಕಾರಣ ಧೋನಿ ಅವರ ಬ್ಯಾಟಿಂಗ್​ ಭಯ.

ರವೀಂದ್ರ ಜಡೇಜಾ ಅವರ ಸುಲಭದ ಕ್ಯಾಚ್ ಅನ್ನು ದೀಪಕ್ ಹೂಡಾ ಬೌಂಡರಿ ಲೈನ್​ನಲ್ಲಿ ಕೈ ಚೆಲ್ಲಿ ಸಿಕ್ಸರ್​ ನೀಡಿದ್ದರು. ಪ್ರತಿ ಪಂದ್ಯದಲ್ಲಿಯೂ ಬೆಸ್ಟ್​ ಫೀಲ್ಡಿಂಗ್​ ನಡೆಸಿದ ಲಕ್ನೋ ತಂಡದ ಆಟಗಾರನಿಗೆ ಡ್ರೆಸಿಂಗ್​ ರೂಮ್​ನಲ್ಲಿ ಜಾಂಟಿ ರೋಡ್ಸ್‌ ಅವರು ಮ್ಯಾಜಿಕ್ ಮೈಕ್ ಎನ್ನುವ ಹೆಸರಿನ ಗೊಂಬೆಯೊಂದನ್ನು ನೀಡಿ ಗೌರವಿಸುತ್ತಾರೆ. ಚೆನ್ನೈ ವಿರುದ್ಧದ ಪಂದ್ಯದ ಬಳಿಕ ಜಾಂಟಿ ಈ ಪ್ರಶಸ್ತಿಯನ್ನು ಕ್ಯಾಚ್​ ಬಿಟ್ಟ ದೀಪಕ್​ ಹೂಡಾಗೆ ನೀಡಿದರು. ಈ ವೇಳೆ ಸಹ ಆಟಗಾರರು ಸೇರಿ ಹೂಡಾಗೂ ಒಂದು ಕ್ಷಣ ಆಶ್ಚರ್ಯವಾಯಿತು.

ಇದನ್ನೂ ಓದಿ IPL 2024: ‘ಕ್ಯಾಚ್ ಆಫ್ ದಿ ಐಪಿಎಲ್ 2024’; ಜಡೇಜಾ ಫ್ಲೈಯಿಂಗ್ ಕ್ಯಾಚ್​ಗೆ ಶಬ್ಬಾಶ್ ಎಂದ ರವಿಶಾಸ್ತ್ರಿ

ದೀಪಕ್​ ಹೂಡಾಗೆ ಈ ಪ್ರಶಸ್ತಿಯನ್ನು ನೀಡುತ್ತಿರುವುದು ಏಕೆಂದು ಕೂಡ ಜಾಂಟಿ ವಿವರಿಸಿದರು. ಒಂದೊಮ್ಮೆ ಹೂಡಾ ಅವರು ಜಡೇಜಾ ಕ್ಯಾಚ್​ ಹಿಡಿಯುತ್ತಿದ್ದರೆ ಧೋನಿ ಬೇಗನೆ ಕ್ರೀಸ್​ಗೆ ಆಗಮಿಸುತ್ತಿದ್ದರು. ಇದನ್ನು ಹೂಡಾ ತಡೆದಿದ್ದಾರೆ. ಇದಕ್ಕಾಗಿ ಅವರಿಗೆ ಈ ಪ್ರಶಸ್ತಿ ನೀಡುತ್ತೇನೆ ಎಂದರು.

“ಫೀಲ್ಡಿಂಗ್ ಪ್ರಶಸ್ತಿಯು ಕೇವಲ ಅದ್ಭುತ ಪ್ರದರ್ಶನಗಳಲಿಗೆ ಮಾತ್ರವಲ್ಲ. ಗೆಲುವಿಗಾಗಿ ಕಲೆ ಕೆಟ್ಟ ಫೀಲ್ಡಿಂಗ್ ತಂತ್ರ ಕೂಡ ಮಾಡಬೇಕು. ಇದನ್ನು ಹೂಡಾ ಮಾಡಿದ್ದಾರೆ. ಧೋನಿ ಬೇಗನೇ ಕ್ರೀಸ್​ಗೆ ಬರುತ್ತಿದ್ದರೆ ಇನ್ನೂ ಹೆಚ್ಚಿನ ಎಸೆತಗಳು ಅವರಿಗೆ ಲಭಿಸುತ್ತಿತ್ತು. ಜತೆಗೆ ದೊಡ್ಡ ಮೊತ್ತದ ಗುರಿ ಕೂಡ ಲಭಿಸುತ್ತಿತ್ತು. ಇದನ್ನು ಹೂಡಾ ತಪ್ಪಿಸಿದ್ದಾರೆ. ಇದು ನಿಜವಾಗಿಯೂ ಅವರ ಬುದ್ಧಿವಂತ ನಿರ್ಧಾರ ಎಂದು ನಾನು ಭಾವಿಸುತ್ತೇನೆ” ಎಂದು ರೋಡ್ಸ್ ಹೇಳಿದರು. ಈ ವಿಡಿಯೊ ವೈರಲ್​ ಆಗಿದೆ.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಮಾಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಆರಂಭಿಕ ವಿಕೆಟ್​ಗಳ ನಷ್ಟದ ಹೊರತಾಗಿಯೂ ಕೊನೇ ಹಂತದಲ್ಲಿ ಉತ್ತಮವಾಗಿ ಆಡಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಲಕ್ನೊ ತಂಡ 19 ಓವರ್​ಗಳಲ್ಲಿ 2ವಿಕೆಟ್ ನಷ್ಟಕ್ಕೆ 180 ರನ್​ ಬಾರಿಸಿ ಗೆಲುವು ಸಾಧಿಸಿತು.

Exit mobile version