Site icon Vistara News

IPL 2024: ಜೋಶ್​ನಿಂದ ಬ್ಯಾಟಿಂಗ್​ ನಡೆಸಿ ಕ್ರಿಸ್​ ಗೇಲ್​ ದಾಖಲೆ ಮುರಿದ ಜಾಸ್​ ಬಟ್ಲರ್​

IPL 2024

ಕೋಲ್ಕತ್ತಾ: ಕೆಕೆಆರ್(Kolkata Knight Riders)​ ವಿರುದ್ಧದ ಪಂದ್ಯದಲ್ಲಿ ಫುಲ್​ ಜೋಶ್​ನಿಂದ ಬ್ಯಾಟಿಂಗ್​ ನಡೆಸಿ ಅಜೇಯ ಶತಕ ಬಾರಿಸಿದ ಜಾಸ್‌ ಬಟ್ಲರ್‌(Jos Buttler) ಅವರು ಐಪಿಎಲ್​ನಲ್ಲಿ(IPL 2024) ಕ್ರಿಸ್ ಗೇಲ್(Chris Gayle)​ ಅವರ ಶತಕದ ದಾಖಲೆಯನ್ನು ಮುರಿದಿದ್ದಾರೆ. ​ಬಟ್ಲರ್​ ಅವರ ಬೊಂಬಾಟ್​ ಬ್ಯಾಟಿಂಗ್​ನಿಂದ ರಾಜಸ್ಥಾನ್‌ ರಾಯಲ್ಸ್‌(Rajasthan Royals) ತಂಡವು ಮಂಗಳವಾರದ ಐಪಿಎಲ್‌ ಪಂದ್ಯದಲ್ಲಿ ಎರಡು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಬಟ್ಲರ್ ಶತಕ ಬಾರಿಸುವ ಮೂಲಕ ಐಪಿಎಲ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರು. ಈ ಮೂಲಕ ಕ್ರಿಸ್​ ಗೇಲ್​ ದಾಖಲೆಯನ್ನು ಹಿಂದಿಕ್ಕಿದರು. ಗೇಲ್​ 6 ಶತಕ ಬಾರಿಸಿದ್ದರು. ಇದೀಗ ಬಟ್ಲರ್​ 7 ಶತಕ ಬಾರಿಸಿದ್ದಾರೆ. 8 ಶತಕ ಬಾರಿಸಿರುವ ವಿರಾಟ್​ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್​ಗಳು


ವಿರಾಟ್​ ಕೊಹ್ಲಿ-8 ಶತಕ

ಜಾಸ್​ ಬಟ್ಲರ್​-7 ಶತಕ

ಕ್ರಿಸ್​ ಗೇಲ್​-6 ಶತಕ

ಕೆಎಲ್​ ರಾಹುಲ್​-4 ಶತಕ

ಡೇವಿಡ್​ ವಾರ್ನರ್​-4 ಶತಕ

ಶೇನ್​ ವಾಟ್ಸನ್​-4 ಶತಕ

ಕೆಕೆಆರ್​ ವಿರುದ್ಧ ಬಿರುಸಿನ ಬ್ಯಾಟಿಂಗ್​ ನಡೆಸಿದ ಬಟ್ಲರ್​ 60 ಎಸೆತಗಳಿಂದ 9 ಬೌಂಡರಿ ಮತ್ತು 6 ಸೊಗಸಾದ ಸಿಕ್ಸರ್​ ನೆರವಿನಿಂದ ಅಜೇಯ 107 ರನ್​ ಬಾರಿಸಿದರು. ಇದು ಬಟ್ಲರ್​ ಅವರ ಆವೃತ್ತಿಯ 2ನೇ ಶತಕ. ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿಯೂ ಅಜೇಯ ಶತಕ ಬಾರಿಸಿದ್ದರು.

ಐತಿಹಾಸಿಕ ಈಡನ್​ ಗಾರ್ಡನ್ಸ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 223 ರನ್ ಬಾರಿಸಿತು ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನಿಂಗ್ಸ್​ನ ಕೊನೇ ಎಸೆತಕ್ಕೆ 8 ವಿಕೆಟ್ ನಷ್ಟ ಮಾಡಿಕೊಂಡು 224 ರನ್​ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ತವರಿನ ಪ್ರೇಕ್ಷಕರ ಮುಂದೆ ಕೆಕೆಆರ್ ತಂಡಕ್ಕೆ ಸೋಲುಣಿಸಿತು.

ಇದನ್ನೂ ಓದಿ IPL 2024 : ಚೆನ್ನೈ ತಂಡ ಸೇರ್ತಾರಾ ಚೇತೇಶ್ವರ ಪೂಜಾರಾ? ಅವರ ಟ್ವೀಟ್​ನ ಅರ್ಥವೇನು?

ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲುಹೊರಟ ರಾಜಸ್ಥಾನ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಯಶಸ್ವಿ ಜೈಸ್ವಾಲ್ ಮತ್ತೆ ವೈಫಲ್ಯ ಎದುರಿಸಿ 19 ರನ್​ಗೆ ಔಟಾದರು. ಸಂಜು ಸ್ಯಾಮ್ಸನ್​ 12 ರನ್​ಗಳಿಗೆ ಸೀಮಿತಗೊಂಡರು. ಆದರೆ, ಬಟ್ಲರ್ ತಳವೂರಿ ಆಡಲು ಆರಂಭಿಸಿದರು. ಇವರಿಗೆ ಸ್ವಲ್ಪ ಹೊತ್ತು ರಿಯಾನ್ ಪರಾಗ್​ (14 ಎಸೆತಕ್ಕೆ 34 ರನ್​) ಸಾಥ್​ ಕೊಟ್ಟರು. ಆದರೆ ಆ ಬಳಿಕದಿಂದ ಸತತವಾಗಿ ವಿಕೆಟ್​ಗಳು ಉರುಳಿದವು. ಜುರೆಲ್​ 2 ರನ್​ಗೆ ಔಟಾದರೆ ಅಶ್ವಿನ್ 8 ರನ್​​ಗೆ ವಿಕೆಟ್ ಒಪ್ಪಿಸಿದರು. ಶಿಮ್ರೋನ್ ಹೆಟ್ಮಾಯರ್ ಶೂನ್ಯಕ್ಕೆ ಔಟಾದರು. ಬಳಿಕ ಬಂದ ರೊವ್ಮನ್ ಪೊವೆಲ್ 13 ಎಸೆತಕ್ಕೆ 26 ರನ್​ ಬಾರಿಸಿ ಗೆಲುವಿನ ಹಾದಿ ತೋರಿದರು. ಅಂತಿಮವಾಗಿ ಬುದ್ಧಿವಂತಿಕೆಯಿಂದ ಬ್ಯಾಟ್ ಮಾಡಿದ ಬಟ್ಲರ್ ಅಜೇಯವಾಗಿ ಉಳಿದು ತಂಡವನ್ನು ಗೆಲ್ಲಿಸಿದರು.

Exit mobile version