Site icon Vistara News

IPL 2024 : ಲಕ್ನೊ ವಿರುದ್ಧ ಕೆಕೆಆರ್​​ಗೆ 98 ರನ್​ಗಳ ಬೃಹತ್​ ಜಯ

IPL 2024

ಲಖನೌ: ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 54ನೇ ಪಂದ್ಯದಲ್ಲಿ ಲಕ್ನೊ ಸೂಪರ್​ ಜೈಂಟ್ಸ್​ ವಿರುದ್ಧ 98 ರನ್​ಗಳ ಬೃಹತ್​ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕಗಳನ್ನು ಸಂಪಾದಿಸಿರುವ ಶ್ರೇಯಸ್​ ಅಯ್ಯರ್ ನೇತೃತ್ವದ ಕೋಲ್ಕೊತಾ ಬಳಗ ಪ್ಲೇಆಫ್​ ಹಂತಕ್ಕೆ ಬಹುತೇಕ ತೇರ್ಗಡೆ ಗೊಂಡಿದೆ. ಇದೇ ವೇಳೆ 11 ಪಂದ್ಯಗಳಲ್ಲಿ 5ನೇ ಸೋಲಿಗೆ ಒಳಗಾಗಿದ್ದು 12 ಅಂಕಗಳ ಸಮೇತ ಐದನೇ ಸ್ಥಾನದಲ್ಲಿ ಉಳಿದಿದೆ.

ಇಲ್ಲಿನ ಶ್ರೀ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ಒಳಗಾಯಿತು.

ಇದನ್ನೂ ಓದಿ: Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

ಬ್ಯಾಟಿಂಗ್​ಗೆ ಆಹ್ವಾನ ಪಡೆದ ಕೆಕೆಆರ್ ತಂಡ ಅದ್ಭುತ್ ಪ್ರದರ್ಶನ ನೀಡಿತು. ಸುನೀಲ್​ ನರೈನ್​ (39 ಎಸೆತ 81 ರನ್​) ಅವರ ಸ್ಫೋಟಕ ಬ್ಯಾಟಿಂಗ್ ಮೂಲಕ ಅತ್ಯುತ್ತಮ ಆರಂಭ ಪಡೆಯಿತು. ಫಿಲ್​ ಸಾಲ್ಟ್​ ಕೂಡ 14 ಎಸೆತಕ್ಕೆ 32 ರನ್ ಬಾರಿಸಿ ಮಿಂಚಿದರು. ಈ ಜೋಡಿ ಮೊದಲ ವಿಕೆಟ್​ಗೆ 61 ರನ್ ಬಾರಿಸಿತು. ನಂತರ ಅಂಗ್​ಕ್ರಿಶ್​ ರಘವಂಶಿ 32 ರನ್ ಬಾರಿಸಿದರೆ ರಸೆಲ್ 12 ರನ್​ಗೆ ಔಟಾದರು. ರಿಂಕು ಸಿಂಗ್ ವೈಫಲ್ಯ ಅನುಭವಿಸಿ 16 ರನ್​ಗೆ ಸೀಮಿತಗೊಂಡರೆ ಕೊನೆಯಲ್ಲಿ ಶ್ರೇಯಸ್ ಅಯ್ಯರ್​2 23 ರನ್​ ಹಾಗೂ ರಮಣ್​ದೀಪ್​ ಸಿಂಗ್ 6 ಎಸೆತಕ್ಕೆ 25 ರನ್ ಬಾರಿಸಿ ದೊಡ್ಡ ಮೊತ್ತ ಬಾರಿಸಲು ನೆರವಾದರು. ಲಕ್ನೊ ಪರ ನವೀನ್ ಉಲ್ ಹಕ್​ 3 ವಿಕೆಟ್ ಪಡೆದರು.

ಬ್ಯಾಟಿಂಗ್ ವೈಫಲ್ಯ

ಗುರಿ ಬೆನ್ನಟ್ಟಲು ಆರಂಭಿಸಿದ ಲಕ್ನೊ ತಂಡ ಕೆಕೆಆರ್​ ಬೌಲರ್​ಗಳ ನಿಖರ ಎಸೆತಗಳಿಗೆ ಹಾಗೂ ಫೀಲ್ಡಿಂಗ್​ಗೆ ಬಲಿಯಾದರು. ಅರ್ಶಿನ್​ ಕುಲ್ಕರ್ಣಿ 9 ರನ್​ಗೆ ಸೀಮಿತಗೊಂಡರೆ ರಾಹುಲ್​ 21 ರನ್​ ಬಾರಿಸಿದರು. ಮಾರ್ಕಸ್​ ಸ್ಟೊಯ್ನಿಸ್​ 36 ರನ್​ ಗೆ ಔಟಾದಾಗ ಲಕ್ನೊ ಆಸೆ ಕರಗಿತು. ದೀಪಕ್ ಹೂಡ 6 ರನ್​ಗೆ ಸೀಮಿತಗೊಂಡರೆ ಪೂರನ್​ 10 ರನ್, ಬದೋನಿ 15 ರನ್​ ಹಾಗೂ ಆಸ್ಟನ್​ ಟರ್ನರ್​ 16 ರನ್ ಕೊಡುಗೆ ಕೊಟ್ಟರು. ಆದರೆ, ದೊಡ್ಡ ಮೊತ್ತದ ಸನಿಹಕ್ಕೆ ಹೋಗಲೂ ಸಾಧ್ಯವಾಗಲಿಲ್ಲ.

ಕೆಕೆಆರ್ ಬೌಲಿಂಗ್​ನಲ್ಲಿ ಹರ್ಷಿತ್​ ರಾಣಾ ಹಾಗೂ ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಪಡೆದರೆ ಆ್ಯಂಡ್ರೆ ರಸೆಲ್​ 2 ವಿಕೆಟ್​ ಉರುಳಿಸಿದರು.

Exit mobile version