Site icon Vistara News

IPL 2024 : ಕೆಕೆಆರ್​ 4ನೇ ಬಾರಿ ಐಪಿಎಲ್​​ನ​ ಫೈನಲ್​ಗೆ, ಎಸ್ಆರ್​ಎಚ್​ಗೆ ಇನ್ನೊಂದು ಅವಕಾಶ

IPL 2024

ಅಹಮದಾಬಾದ್​​: ಮಿಚೆಲ್​ ಸ್ಟಾರ್ಕ್​ (4 ವಿಕೆಟ್​ 34ರನ್​​ ) ಅವರ ಮಾರಕ ಬೌಲಿಂಗ್ ಹಾಗೂ ಶ್ರೇಯಸ್​ ಅಯ್ಯರ್​ (58 ರನ್​ 24 ಎಸೆತ), ವೆಂಕಟೇಶ್​ ಅಯ್ಯರ್ (51 ರನ್​ 28 ಎಸೆತ) ಜೋಡಿಯ ಅರ್ಧ ಶತಕಗಳ ನೆರವು ಪಡೆದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್ ತಂಡದ ವಿರುದ್ಧ ಅಮೋಘ 8 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದರೊಂದಿಗೆ ಕೋಲ್ಕೊತಾ ಮೂಲದ ತಂಡ ಐಪಿಎಲ್​​ನಲ್ಲಿ ನಾಲ್ಕನೇ ಬಾರಿ ಫೈನಲ್​ಗೆ ಪ್ರವೇಶ ಮಾಡಿದೆ. ಈ ಹಿಂದೆ ಮೂರು ಬಾರಿ ಪ್ರವೇಶಿಸಿ ಎರಡು ಬಾರಿ ಟ್ರೋಫಿ ಗೆದ್ದಿತ್ತು. ಒಂದು ಬಾರಿ ವೈಫಲ್ಯ ಕಂಡಿತ್ತು.

ಈ ಪಂದ್ಯದಲ್ಲಿ ಸೋಲು ಕಂಡಿರುವ ಎಸ್​ಆರ್​ಎಚ್ ತಂಡಕ್ಕೆ ಎಲಿಮಿನೇಟರ್​ ಪಂದ್ಯದ ವಿಜೇತರ ವಿರುದ್ಧ ಮತ್ತೊಂದು ಪಂದ್ಯವಾಡುವ ಅವಕಾಶವಿದೆ. ಅಲ್ಲಿ ಗೆದ್ದರೆ ಫೈನಲ್​ಗೆ ಫೈನಲ್​ಗೆ ಪ್ರವೇಶ ಮಾಡಬಹುದು. ಆದಾಗ್ಯೂ ಈ ಪಂದ್ಯವು ಸಂಪೂರ್ಣವಾಗಿ ಏಕಮುಖವಾಗಿತ್ತು. ಎಸ್​ಆರ್​ಎಚ್​​ ಈ ಪಂದ್ಯದಲ್ಲಿ ಗೆದ್ದಿರುವುದು ಕೇವಲ ಟಾಸ್​ ಮಾತ್ರ. ಉಳಿದೆಲ್ಲ ಕ್ಷಣಗಳು ಕೆಕೆಆರ್​ ಪರವಾಗಿದ್ದವು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಎಸ್​ಆರ್​ಎಚ್​ ತಂಡ ಮೊದಲ ಬ್ಯಾಟ್​ ಮಾಡಲು ನಿರ್ಧರಿಸಿತು. ಆದರೆ, ಕೆಕೆಆರ್ ತಂಡದ ಪ್ರಚಂಡ ಬೌಲಿಂಗ್ ಮುಂದೆ ಎಸ್​ಆರ್​​ಎಚ್ ಬ್ಯಾಟರ್​ಗಳು ತಲೆ ಬಾಗಿ 19.3 ಓವರ್​ಗಳಲ್ಲಿ 159 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಕೆಕೆಆರ್​ ತಂಡ ಕೇವಲ 13.4 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 162 ರನ್ ಬಾರಿಸಿ ಗೆಲುವು ಸಾಧಿಸಿತು.

ಇದನ್ನೂ ಓದಿ: IPL 2024 : ರನ್​ ಔಟ್​​ ಆಗಿದ್ದಕ್ಕೆ ಸಿಟ್ಟಿಗೆದ್ದ ಕಾವ್ಯಾ ಮಾರನ್​, ಕಣ್ಣೀರು ಹಾಕಿದ ರಾಹುಲ್ ತ್ರಿಪಾಠಿ

ಭರ್ಜರಿ ಬ್ಯಾಟಿಂಗ್​

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಕೆಕೆಆರ್​ಗೆ ಉತ್ತಮ ಆರಂಭ ದೊರಕಿತು. ರಹ್ಮನುಲ್ಲಾ ಗುರ್ಬಾಜ್​ 23 ರನ್ ಬಾರಿಸಿದರೆ ಸುನೀಲ್​ ನರೈನ್​ 21 ರನ್​ ಬಾರಿಸಿದರು. ಹೀಗಾಗಿ ಮೊದಲ ವಿಕೆಟ್​​ಗೆ 41 ರನ್ ದೊರಕಿತು. ಬಳಿಕ ಬಂದ ವೆಂಕಟೇಶ್ ಅಯ್ಯರ್​ ಎಸ್​ಆರ್​ಎಚ್​ ಬೌಲರ್​ಗಳಿಗೆ ಚೇತರಿಸಿಕೊಳ್ಳಲು ಅವಕಾಶ ಕೊಡಲಿಲ್ಲ. 5 ಫೋರ್​ ಮತ್ತು 4 ಸಿಕ್ಸರ್ ಸಮೇತ ಅಜೇಯ 51 ರನ್ ಬಾರಿಸಿದರು. ಬಳಿಕ ಬಂದ ನಾಯಕ ಶ್ರೇಯಸ್​ ಅಯ್ಯರ್​ 5 ಫೋರ್ 4 ಸಿಕ್ಸರ್ ಸಮೇತ 5 ಅಜೇಯ 58 ರನ್ ಬಾರಿಸಿ ಪಂದ್ಯ ಬೇಗ ಮುಗಿಯುವಂತೆ ನೋಡಿಕೊಂಡರು.

ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟ್ ಮಾಡಲು ಮುಂದಾದ ಎಸ್​ಆರ್​ಎಚ್ ತಂಡಕ್ಕೆ ಆಸೀಸ್​ ವೇಗಿ ಸ್ಟಾರ್ಕ್​ ಆಘಾತ ಕೊಟ್ಟರು. ಹೊಡೆಬಡಿಯ ಬ್ಯಾಟರ್ ಟ್ರಾವಿಸ್​ ಹೆಡ್​ ಶೂನ್ಯಕ್ಕೆ ಪೆವಿಲಿಯನ್​ಗೆ ಸಾಗುವಂತೆ ಅವರು ಮಾಡಿದರು. ಅಭಿಷೇಕ್ ಶರ್ಮಾ 3 ವಿಕೆಟ್​ಗೆ ಔಟಾಗುವುದರೊಂದಿಗೆ ತಂಡದ ವಿಕೆಟ್​ ಪತನದ ಕತೆ ಶುರುವಾಯಿತು. ನಿತಿಶ್ ಕುಮಾರ್​ 9 ರನ್​ಗೆ ಔಟಾದರೆ ಶಹಬಾಜ್​ ಅಹಮದ್​ ಡಕ್​ಔಟ್ ಆದರು. ರಾಹುಲ್ ತ್ರಿಪಾಠಿ (55 ರನ್​) ಅರ್ಧ ಶತಕ ಬಾರಿಸಿ ತಂಡಕ್ಕೆ ನೆರವಾಗಲು ಯತ್ನಿಸಿದರೂ ಅವರು ಪ್ರಯತ್ನ ಕೈಗೂಡಲಿಲ್ಲ. ಕ್ಲಾಸೆನ್​ 32 ರನ್ ಬಾರಿಸಿ ಔಟಾದರು. ಕೊನೆಯಲ್ಲಿ ನಾಯಕ ಪ್ಯಾಟ್ ಕಮಿನ್ಸ್​ 30 ರನ್​ ಬಾರಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು. ಆದಾಗ್ಯೂ ದೈತ್ಯ ಕೆಕೆಆರ್​ಗೆ ಆ ರನ್ ಸವಾಲಾಗಲೇ ಇಲ್ಲ.

Exit mobile version