Site icon Vistara News

IPL 2024 : ಕೆಕೆಆರ್ ವಿರುದ್ಧ ಆರ್​ಸಿಬಿಗೆ 7 ವಿಕೆಟ್​ ಹೀನಾಯ ಸೋಲು

KKR Team- IPL 2024

ಬೆಂಗಳೂರು: ದುರ್ಬಲ ಬೌಲಿಂಗ್ ಹಾಗೂ ನಿಯಂತ್ರಣವಿಲ್ಲ ಬ್ಯಾಟಿಂಗ್ ಹಾಗೂ ಕಳಪೆ ಫೀಲ್ಡಿಂಗ್​ಗೆ ಬೆಲೆ ತೆತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಕೋಲ್ಕೊತಾ ನೈಟ್​ ರೈಡರ್ಸ್​ (Kolkata Knight Riders) ವಿರುದ್ಧದ ಐಪಿಎಲ್​ (IPL 2024) ಪಂದ್ಯದಲ್ಲಿ 7 ವಿಕೆಟ್​ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಕೆಕೆಆರ್​ ವಿರುದ್ಧ ಬೆಂಗಳೂರಿನಲ್ಲಿ ಸೋಲುವ ಚಾಳಿಯನ್ನು ಮತ್ತೆ ಮುಂದುವರಿಸಿದೆ ಆರ್​ಸಿಬಿ ಸೋಲುಗಳ ಶಾಪದಿಂದ ವಿಮೋಚನೆ ಪಡೆಯಲು ಯಾವುದೇ ಪ್ರಯತ್ನವನ್ನು ಆರ್​ಸಿಬಿ (RCB) ಕಲಿಗಳು ಮಾಡಿಲ್ಲ ಎಂಬುದೇ ಅಭಿಮಾನಿಗಳಿಗೆ ಬೇಸರದ ವಿಷಯ. ಕೆಕೆಆರ್​ ತಂಡದ ಆಟಗಾರಾದ ವೆಂಕಟೇಶ್ ಅಯ್ಯರ್​ (50), ಸುನಿಲ್​ ನರೈನ್​ (47) ಹಾಗೂ ಫಿಲ್​ ಸಾಲ್ಟ್​ (30) ಗೆಲುವಿನ ರೂವಾರಿಗಳೆನಿಸಿಕೊಂಡರು. ಇದರ ಜತೆಗೆ ಕಿಂಗ್ ಕೊಹ್ಲಿಯ (83*) ಅಮೋಘ ಅರ್ಧ ಶತಕವೂ ವ್ಯರ್ಥಗೊಂಡಿತು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಅಂತೆಯೇ ಬ್ಯಾಟಿಂಗ್​ಗೆ ನೆರವು ನೀಡುವ ಪಿಚ್​ನಲ್ಲಿ ಕುಂಟುತ್ತಾ ರನ್ ಪೇರಿಸಿ ನಿಗದಿತ 20 ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ಗೆ 182 ರನ್ ಬಾರಿಸಿತು. ಇದಕ್ಕೆ ಪ್ರತಿಯಾಗಿ ಆಡಿದ ನೈಟ್​ರೈಡರ್ಸ್​ ಬಳಗ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ. ಇನ್ನೂ 19 ಎಸೆತಗಳ ಬಾಕಿ ಇರುವಂತೆಯೇ 3 ವಿಕೆಟ್​ಗೆ 186 ರನ್ ಬಾರಿಸಿ ಗೆಲುವು ಸಾಧಿಸಿತು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಕೆಕೆಆರ್​ ಅಬ್ಬರಿಸಿ ಬೊಬ್ಬಿರಿಯಿತು. ಆರ್​ಸಿಬಿ ಬೌಲರ್​ಗಳ ಲಯ ತಪ್ಪಿದ ಬೌಲಿಂಗ್​ಗೆ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದರು. ಫಿಲ್​ ಸಾಲ್ಟ್​ 20 ಎಸೆತಕ್ಕೆ 30 ರನ್ ಬಾರಿಸಿದರೆ, ಸುನೀಲ್​ ನರೈನ್​ 22 ಎಸೆತಕ್ಕೆ 47 ರನ್ ಚಚ್ಚಿದರು. ಇವರ ಇನಿಂಗ್ಸ್​ನಲ್ಲಿ 2 ಫೋರ್ ಹಾಗೂ 5 ಸಿಕ್ಸರ್​ಗಳು ಇದ್ದವು. ಮೊಹಮ್ಮದ್ ಸಿರಾಜ್ ಮೊದಲ ಓವರ್​ನಲ್ಲಿ 18 ರನ್ ಬಿಟ್ಟು ಕೊಟ್ಟು ಸೋಲಿಗೆ ಮುನ್ನುಡಿ ಬರೆದರು. ಯಶ್​ ದಯಾಳ್​, ಅಲ್ಜಾರಿ ಜೋಸೆಫ್​ ಕೂಡ ದುಬಾರಿ ಎನಿಸಿಕೊಂಡರು. ಬಳಿಕ ವೆಂಕಟೇಶ್​ ಅಯ್ಯರ್​ 50 ರನ್ ಬಾರಿಸಿದರೆ ನಾಯಕ ಶ್ರೇಯಸ್ ಅಯ್ಯರ್​39 ರನ್ ಬಾರಿಸಿದರು.

ಮಾನ ಕಾಪಾಡಿದ ಕೊಹ್ಲಿ

ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ಹೀನಾಯ ಪ್ರದರ್ಶನ ನೀಡಿತು. ನಾಯಕ ಫಾಪ್ ಡು ಪ್ಲೆಸಿಸ್​ ಮತ್ತೊಮ್ಮೆ ವಿಫಲಗೊಂಡರಲ್ಲದೆ 8 ರನ್ ಬಾರಿಸಿ ಔಟಾದರು. ಬಳಿಕ ಬಂದ ಕ್ಯಾಮೆರೂನ್ ಗ್ರೀನ್​ 33 ರನ್ ಬಾರಿಸಿದರೂ ಅದರಲ್ಲಿ ವೇಗ ಇರಲಿಲ್ಲ. ಗ್ಲೆನ್​ ಮ್ಯಾಕ್ಸ್​ವೆಲ್ ಹಾಲಿ ಟೂರ್ನಿಯ ಮೂರನೇ ಪಂದ್ಯದಲ್ಲಿ 20 ರನ್ ಗಡಿ ದಾಟಿದರು. ಅವರ ಸ್ಕೋರ್​ 28.

ಇದನ್ನೂ ಓದಿ: Gambhir vs Kohli : ಹಗೆತನ ಮರೆತು ‘ಹಗ್’ ಮಾಡಿದ ಕೊಹ್ಲಿ- ಗಂಭೀರ್​, ಇಲ್ಲಿದೆ ವಿಡಿಯೊ

ಮಾಜಿ ನಾಯಕ ವಿರಾಟ್ ಕೊಹ್ಲಿ ಮಾತ್ರ ಆರಂಭದಿಂದಲೇ ವೇಗದ ರನ್​ ಗಳಿಕೆಗೆ ಮನಸ್ಸು ಮಾಡಿದರು. ಆದರೆ, ವಿಕೆಟ್​ಗಳು ಪತನಗೊಳ್ಳುತ್ತಿದ್ದ ಕಾರಣ ಅವರಿಗೆ ಬಿರುಸು ನೀಡಲು ಸಾಧ್ಯವಾಗಲಿಲ್ಲ. ನಿಧಾನವಾಗಿ ಅಡಿದ ಅವರು ಕೊನೇ ಹಂತದಲ್ಲಿ ಬೌಂಡರಿ, ಸಿಕ್ಸರ್​ಗಳನ್ನು ಬಾರಿಸಿ ಅಜೇಯ 83 ರನ್ ಬಾರಿಸಿದರು. ಅವರ ಇನಿಂಗ್ಸ್​ನಲ್ಲಿ 4 ಫೋರ್ ಹಾಗೂ ಅಷ್ಟೇ ಸಂಖ್ಯೆಯ ಸಿಕ್ಸರ್​ಗಳು ಇದ್ದವು. ಕೊನೆಯಲ್ಲಿ ದಿನೇಶ್ ಕಾರ್ತಿಕ್​ 8 ಎಸೆತಕ್ಕೆ 20 ರನ್ ಬಾರಿಸಿದರು.

ಕೆಕೆಆರ್ ಪರ ಬೌಲಿಂಗ್​ನಲ್ಲಿ ಹರ್ಷಿತ್ ರಾಣಾ 2 ವಿಕೆಟ್ ಪಡೆದರೆ, ಆ್ಯಂಡ್ರೆ ರಸೆಲ್ ಕೂಡ 2 ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version