Site icon Vistara News

IPL 2024: ಕೆ.ಎಲ್​ ರಾಹುಲ್​ಗೆ ಬೈದ ಎಲ್​​ಎಸ್​​ಜಿ ಮಾಲೀಕ ಗೋಯೆಂಕಾ ವರ್ತನೆಗೆ ಮೊಹಮ್ಮದ್​ ಶಮಿ ಆಕ್ರೋಶ

IPL 2024

ನವದೆಹಲಿ: ಐಪಿಎಲ್ ಪಂದ್ಯ (IPL 2024) ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ನಾಯಕ ಕೆಎಲ್ ರಾಹುಲ್ (KL Rahul) ಮತ್ತು ಸಂಜೀವ್ ಗೋಯೆಂಕಾ ನಡುವಿನ ಮಾತುಕತೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ನೆಟ್ಟಿಗರು ಈ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿರುವ ನಡುವೆಯೇ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ರಾಹುಲ್​ಗೆ ಬೆಂಬಲ ವ್ಯಕ್ತಪಡಿಸಿರುವ ಅವರು ಗೊಯೆಂಕಾ ವರ್ತನೆಗೆ ಕಿಡಿಕಾರಿದ್ದಾರೆ. ಸಂಜೀವ್ ಗೋಯೆಂಕಾ ಅವರ ಕ್ರಮವನ್ನು ಟೀಕಿಸಿದ ಮೊಹಮ್ಮದ್ ಶಮಿ, ಈ ವಿಷಯವನ್ನು ಸಾರ್ವಜನಿಕವಾಗಿ ಮಾತನಾಡುವ ಬದಲು ಡ್ರೆಸ್ಸಿಂಗ್ ಕೋಣೆಯಲ್ಲಿ ಪರಿಹರಿಸಬಹುದಿತ್ತು ಎಂದು ಹೇಳಿದ್ದಾರೆ.

ಮೇ 8 ರಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೂಪರ್ ಜೈಂಟ್ಸ್ 10 ವಿಕೆಟ್ ಗಳ ಸೋಲನುಭವಿಸಿತು. ಈ ಸೋಲು ನೆಟ್ ರನ್ ರೇಟ್ (NRR) ಕುಸಿತದೊಂದಿಗೆ ಐಪಿಎಲ್ 2024 ಪ್ಲೇಆಫ್ ತಲುಪುವ ರಾಹುಲ್ ಬಳಗದ ಭರವಸೆಯನ್ನು ಭಗ್ನಗೊಳಿಸಿತು. ಈಗ, ಅವರ ಭವಿಷ್ಯವು ಇತರ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ.

ಹೈದರಾಬಾದ್​ನಲ್ಲಿ ಎದುರಾದ ಸೋಲಿನ ನಂತರ, ಎಲ್ಎಸ್​ಜಿ ಮಾಲೀಕ ಸಂಜೀವ್ ಗೋಯೆಂಕಾ ಅಸಮಾಧಾನಗೊಂಡಿದ್ದರು. ಮೈದಾನದಲ್ಲಿಯೇ ನಾಯಕ ಕೆಎಲ್ ರಾಹುಲ್ ಅವರೊಂದಿಗೆ ವಾಗ್ವಾದ ನಡೆಸಿದ್ದರು. ಸಾರ್ವಜನಿಕವಾಗಿ ನಡೆದ ಸಂಭಾಷಣೆಯ ಬಗ್ಗೆ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಗೋಯೆಂಕಾ ಅವರನ್ನು ಟೀಕಿಸಿದ್ದಾರೆ. ರಾಹುಲ್ ಅವರೊಂದಿಗಿನ ನಡವಳಿಕೆಯನ್ನು ವೃತ್ತಿಪರವಲ್ಲ ಮತ್ತು ಸ್ವೀಕಾರಾರ್ಹವಲ್ಲ ಎಂದು ಕರೆದಿದ್ದಾರೆ.

ನೀವು ಗೌರವಾನ್ವಿತ ವ್ಯಕ್ತಿ – ಮೊಹಮ್ಮದ್ ಶಮಿ ಟೀಕೆ

ಕ್ರಿಕ್ಬಝ್ ಜೊತೆ ಮಾತನಾಡಿದ ಮೊಹಮ್ಮದ್ ಶಮಿ, ಸಂಜೀವ್ ಗೋಯೆಂಕಾ ಕೆಎಲ್ ರಾಹುಲ್​​ಗೆ ಸಾರ್ವಜನಿಕವಾಗಿ ಅಗೌರವ ತೋರಿದ್ದಾರೆ ಎಂದು ಟೀಕಿಸಿದರು. ಅಂತಹ ವಿಷಯಗಳನ್ನು ಕ್ಯಾಮೆರಾಗಳ ಮುಂದೆ ಪರಿಹರಿಸುವ ಬದಲು ಖಾಸಗಿಯಾಗಿ ಇತ್ಯರ್ಥಪಡಿಸಬೇಕು ಎಂದು ಶಮಿ ಹೇಳಿದ್ದಾರೆ.

ಆಟಗಾರರಿಗೆ ಗೌರವವಿದೆ, ಮತ್ತು ನೀವು ಮಾಲೀಕರಾಗಿರುವುದರಿಂದ ನೀವು ಗೌರವಾನ್ವಿತ ವ್ಯಕ್ತಿಯೂ ಹೌದು. ಅನೇಕ ಜನರು ನಿಮ್ಮನ್ನು ನೋಡುತ್ತಿರುತ್ತಾರೆ. ನಿಮ್ಮಿಂದ ಕಲಿಯುತ್ತಿದ್ದಾರೆ. ಕ್ಯಾಮೆರಾಗಳ ಮುಂದೆ ಈ ವಿಷಯಗಳು ಸಂಭವಿಸಿದರೆ ಅ ದು ನಾಚಿಕೆಗೇಡಿನ ವಿಷಯವಾಗುತ್ತದೆ ಎಂದು ಶಮಿ ಹೇಳಿದ್ದಾರೆ.

ನೀವು ನಿಮ್ಮ ಅಭಿಪ್ರಾಯಗಳನ್ನು ಹೇಳಲು ಅನೇಕ ವಿಭಿನ್ನ ಮಾರ್ಗಗಳಿವೆ. ಡ್ರೆಸ್ಸಿಂಗ್ ರೂಮ್ ಅಥವಾ ಹೋಟೆಲ್​ನಲ್ಲಿ ಅದೇ ಕೆಲಸವನ್ನು ಮಾಡಬಹುದಿತ್ತು. ಅದನ್ನು ಮೈದಾನದಲ್ಲಿ ಮಾಡುವ ಅಗತ್ಯವಿರಲಿಲ್ಲ. ಈ ರೀತಿ ಮಾಡುವುದು ಗೌರವ ಸಂಕೇತ ಅಲ್ಲ ” ಎಂದು ಶಮಿ ಹೇಳಿದ್ದಾರೆ.

ಕೆಎಲ್ ರಾಹುಲ್ 33 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ಪ್ರವಾಸಿ ತಂಡವು ಪವರ್ ಪ್ಲೇನಲ್ಲಿ ಕೇವಲ ೨೭ ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಆಯುಷ್ ಬಡೋನಿ (55) ಮತ್ತು ನಿಕೋಲಸ್ ಪೂರನ್ (48) ಅವರ ಕೊನೇ ಹಂತದ ಕೊಡುಗೆಯೊಂದಿಗೆ ಲಕ್ನೋ ಮೂಲದ ತಂಡವು 20 ಓವರ್​ಗಳಲ್ಲಿ 165 ರನ್ ಗಳಿಸಿತು.

ಉತ್ತರವಾಗಿ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಕೇವಲ 9.4 ಓವರ್​ಗಳಲ್ಲಿ 166 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 38 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿದರು. ಹೀಗಾಗಿ 10 ವಿಕೆಟ್​ಗಳ ವಿಜಯ ಲಭಿಸಿತು.

ಇದನ್ನೂ ಓದಿ: IPL 2024 : ಆರ್​ಸಿಬಿಯ ಪ್ಲೇಆಫ್​ ಚಾನ್ಸ್​ ಇದೆಯೇ? ಇಲ್ಲಿದೆ ನೋಡಿ ಲೆಕ್ಕಾಚಾರ

ಇದು ಕೆಟ್ಟ ಸಂದೇಶ ರವಾನಿಸುತ್ತದೆ – ಮೊಹಮ್ಮದ್ ಶಮಿ

ನಾಯಕನ ಬಗ್ಗೆ ಸಾರ್ವಜನಿಕ ಟೀಕೆ ನ್ಯಾಯಸಮ್ಮತವಲ್ಲ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ. ತಂಡದ ಯೋಜನೆಗಳು ಯಾವಾಗಲೂ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಪ್ರತಿಯೊಬ್ಬ ಆಟಗಾರನು ಗೌರವಕ್ಕೆ ಅರ್ಹನಾಗಿದ್ದಾನೆ ಮತ್ತು ಗೌರವಯುತ ಸಂವಹನದ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.

ರಾಹುಲ್ ನಾಯಕರೂ ಹೌದು. ಅವರು ಸಾಮಾನ್ಯ ಆಟಗಾರನಲ್ಲ. ಇದು ಒಂದು ತಂಡದ ಆಟ. ಯೋಜನೆ ಯಶಸ್ವಿಯಾಗದಿದ್ದರೆ, ಅದು ದೊಡ್ಡ ವಿಷಯವಲ್ಲ. ಆಟದಲ್ಲಿ ಏನು ಬೇಕಾದರೂ ಸಾಧ್ಯ. ಒಳ್ಳೆಯ ಅಥವಾ ಕೆಟ್ಟ ದಿನಗಳು ಇರಬಹುದು. ಆದರೆ ಪ್ರತಿಯೊಬ್ಬ ಆಟಗಾರನಿಗೆ ಗೌರವವಿದೆ, ಮತ್ತು ಮಾತನಾಡಲು ಒಂದು ಮಾರ್ಗವಿದೆ. ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ, “ಎಂದು ಶಮಿ ಹೇಳಿದರು.

ಕೆಎಲ್ ರಾಹುಲ್ ನೇತೃತ್ವದ ತಂಡವು ಪ್ರಸ್ತುತ ಆರು ಗೆಲುವು ಮತ್ತು ಆರು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್ ರೇಸ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CKS), ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ ) ತಂಡಗಳಿಂದ ಎಲ್ಎಸ್​​ಜಿ ತಂಡವು ಕಠಿಣ ಸ್ಪರ್ಧೆ ಎದುರಿಸುತ್ತಿದೆ.

Exit mobile version