Site icon Vistara News

IPL 2024: ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿ ಬಾರಿಸಿದ ಪರಾಗ್; ವಿಡಿಯೊ ವೈರಲ್​

IPL 2024

ಜೈಪುರ: ವಿಶ್ವ ಕ್ರಿಕೆಟ್ ನಲ್ಲಿ ಹೊಸ ಹೊಸ ಬ್ಯಾಟಿಂಗ್ ಶಾಟ್ ಗಳು ಪರಿಚಯ ಆಗುತ್ತಿವೆ. ಧೋನಿ(ms dhoni) ಪರಿಚಯಿಸಿದ ‘ಹೆಲಿಕಾಪ್ಟರ್ ಶಾಟ್’(Helicopter shot) ಅನ್ನು ಹೊಡೆಯಲು ಅನೇಕರು ಪ್ರಯತ್ನಿಸಿದರೂ ಸಫಲರಾಗಿದ್ದು ಮಾತ್ರ ಕೆಲವರಷ್ಟೇ. ಬುಧವಾರ ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್​ ತಂಡದ(Rajasthan Royals) ರಿಯಾನ್​ ಪರಾಗ್​(Riyan Parag) ಹೆಲಿಕಾಪ್ಟರ್ ಶಾಟ್ ಹೊಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಚ್ಚರಿ ಎಂದರೆ ಪರಾಗ್​ ಕೂಡ ಧೋನಿಯ ಅಪಟ್ಟ ಅಭಿಮಾನಿ.

ಜೈಪುರ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಪರಾಗ್​ ಈ ಹೆಲಿಕಾಪ್ಟರ್ ಶಾಟ್ ಬಾರಿಸಿದರು. ಗುಜರಾತ್​ ಬೌಲಿಂಗ್​ ಇನಿಂಗ್ಸ್​ನ 17ನೇ ಓವರ್​ನ ದ್ವಿತೀಯ ಎಸೆತದಲ್ಲಿ ಬೌಂಡರಿ ಬಾರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಮೋಹಿತ್​ ಶರ್ಮ ಎಸೆತವನ್ನು ಹೆಲಿಕಾಪ್ಟರ್ ಶಾಟ್ ಮೂಲಕ ಬೌಂಡರಿ ಬಾರಿಸಿದರು. ಉಮೇಶ್​ ಯಾದವ್​ ಅವರು ಬೌಂಡರಿ ತಡೆಯುವ ಪ್ರಯತ್ನ ಮಾಡಿದರೂ ಕೂಡ ವಿಫಲರಾದರು.

ಹಿಂದೊಮ್ಮೆ 2021ರಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್​ ಶಮಿ ಅವರ ಎಸೆತಕ್ಕೆ ಪರಾಗ್​ ಹೆಲಿಕಾಪ್ಟರ್ ಶಾಟ್ ಹೊಡೆದರೂ ಕ್ಯಾಚ್​ ನೀಡಿ ನಿರಾಸೆ ಅನುಭವಿಸಿದ್ದರು. ಇದೀಗ 3 ವರ್ಷಗಳ ಬಳಿಕ ಹೆಲಿಕಾಪ್ಟರ್ ಶಾಟ್ ಬಾರಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಅರ್ಧಶತಕ ಬಾರಿಸಿದ ಪರಾಗ್​


ಜಾಸ್​ ಬಟ್ಲರ್​ ಅವರ ವಿಕೆಟ್​ ಪತನದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಪರಾಗ್​ ಕೇಲವ 6 ರನ್​ ಗಳಿಸಿದ್ದ ವೇಳೆ ರಶೀದ್​ ಖಾನ್​ ಅವರ ಓವರ್​ನಲ್ಲಿ ಕೀಪರ್​ ಮ್ಯಾಥ್ಯೂ ವೇಡ್​ ಕೈಚೆಲ್ಲಿದ ಕ್ಯಾಚ್​ನಿಂದ ಜೀವದಾನ ಪಡೆದರು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿದ ಅವರು 34 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಪ್ರತಿ ಓವರ್​ಗೊಂದು ಸಿಕ್ಸರ್​ ಮತ್ತು ಬೌಂಡರಿ ಬಾರಿಸುತ್ತಲೇ ಮುನ್ನುಗ್ಗಿದ ಪರಾಗ್​ ಅಂತಿಮವಾಗಿ 48 ಎಸೆತಗಳಿಂದ 76 ರನ್​ ಗಳಿಸಿ ಬೌಂಡರಿ ಲೈನ್​ನಲ್ಲಿ ವಿಜಯ್​ ಶಂಕರ್​ ಹಿಡಿದ ಅಸಾಮಾನ್ಯ ಕಾಚ್​ನಿಂದ ಔಟಾದರು. ಅವರ ಈ ಸ್ಫೋಟಕ ಇನಿಂಗ್ಸ್​ನಲ್ಲಿ 5 ಸೊಗಸಾದ ಸಿಕ್ಸರ್​ ಮತ್ತು 3 ಬೌಂಡರಿ ದಾಖಲಾಯಿತು. 4ನೇ ವಿಕೆಟ್​ಗೆ ನಾಯಕ ಸಂಜು ಜತೆ ಸೇರಿ 130 ರನ್​ಗಳ ಜತೆಯಾಟ ಕೂಡ ನಿಭಾಯಿಸಿದರು.

ಇದನ್ನೂ ಓದಿ IPL 2024: ಸ್ಮರಣೀಯ ಪಂದ್ಯವನ್ನಾಡುತ್ತಿರುವ ಚಹಲ್​ಗೆ ಪತ್ನಿಯಿಂದ ಭಾವುಕ ಸಂದೇಶ

ಸಂಜು ಸ್ಯಾಮ್ಸನ್​ ಕೂಡ ಬಿರುಸಿನ ಬ್ಯಾಟಿಂಗ್​ ಮೂಲಕ 38 ಎಸೆತಗಳಿಂದ ಅಜೇಯ 68 ರನ್​ ಬಾರಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ಕಳೆದ ಆರ್​ಸಿಬಿ ವಿರುದ್ಧ ಅಜೇಯ ಶತಕ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಜಾಸ್​ ಬಟ್ಲರ್​ ಈ ಪಂದ್ಯದಲ್ಲಿ ಕೇವಲ 8 ರನ್​ ಗಳಿಸಿ ನಿರಾಸೆ ಮೂಡಿಸಿದರು. ಇವರ ಜತೆಗಾರ ಯಶಸ್ವಿ ಜೈಸ್ವಾಲ್​ 24 ರನ್​ ಗಳಿಸಿದರು. ಗುಜರಾತ್​ ಪರ ಉಮೇಶ್​ ಯಾದವ್​, ರಶೀದ್​ ಖಾನ್​, ಮತ್ತು ಮೋಹಿತ್​ ಶರ್ಮ ತಲಾ ಒಂದೊಂದು ವಿಕೆಟ್​ ಪಡೆದರು.

Exit mobile version