Site icon Vistara News

IPL 2024: ಮಕ್ಕಳ ಶಾಲಾ ಶುಲ್ಕಕ್ಕೆ ತೆಗೆದಿಟ್ಟ 64 ಸಾವಿರ ಹಣದಲ್ಲಿ ಟಿಕೆಟ್​ ಖರೀದಿಸಿ ಐಪಿಎಲ್​ ಪಂದ್ಯ ವೀಕ್ಷಿಸಿದ ತಂದೆ

IPL 2024

ಚೆನ್ನೈ: ಈ ಬಾರಿಯ ಐಪಿಎಲ್(IPL 2024)​ ಟೂರ್ನಿ ಬಳಿಕ ಚೆನ್ನೈ ತಂಡದ ಆಟಗಾರ, ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು​ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರನ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆಯೂ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಇಲ್ಲೊಬ್ಬ ಅಭಿಮಾನಿ ಧೋನಿಯ ಆಟ ನೋಡಲೆಂದೇ ಮಕ್ಕಳ ಶಾಲಾ ಶುಲ್ಕ ಕಟ್ಟದೆ 64 ಸಾವಿರ ರೂ. ನೀಡಿ ಟಿಕೆಟ್‌ ಖರೀದಿಸಿದ್ದಾನೆ. ಈ ವಿಚಾರವನ್ನು ಈ ಅಭಿಮಾನಿ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾನೆ. ಇದರ ವಿಡಿಯೊ ವೈರಲ್​ ಆಗಿದೆ.

ವೈರಲ್ ವಿಡಿಯೊದಲ್ಲಿ ಮಾತನಾಡಿದ ಧೋನಿ ಹಾಗೂ ಸಿಎಸ್‌ಕೆ ತಂಡದ ಅಭಿಮಾನಿ, ನನಗೆ ಚೆನ್ನೈ ಪಂದ್ಯದ ಟಿಕೆಟ್ ಸಿಗಲಿಲ್ಲ, ಆದ್ದರಿಂದ ನಾನು ಬ್ಲ್ಯಾಕ್​ ಮಾರ್ಕೆಟ್​​ನಲ್ಲಿ ಟಿಕೆಟ್ ಖರೀದಿಸಿದೆ. ಈ ಟಿಕೆಟ್‌ನ ಒಟ್ಟು ಬೆಲೆ 64 ಸಾವಿರ ರೂಪಾಯಿ. ಈ ಹಣವನ್ನು ನಾನು ನನ್ನ ಹೆಣ್ಣು ಮಕ್ಕಳ ಶಾಲಾ ಶುಲ್ಕ ಕಟ್ಟಲು ಕೂಡಿಟ್ಟಿದ್ದೆ. ಮಕ್ಕಳ ಶಾಲಾ ಶುಲ್ಕ ಕಟ್ಟದಿದ್ದರೂ ಧೋನಿ ಆಟವನ್ನು ನೋಡಿ ನಮಗೆಲ್ಲರಿಗೂ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ. ಈ ಪಂದ್ಯಕ್ಕೆ ತಮ್ಮ ಮೂವರು ಮಕ್ಕಳನ್ನು ಸಹ ಕರೆದುಕೊಂಡು ಹೋಗಿದ್ದಾನೆ. ಈತನ ಅಭಿಮಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದರೂ ಸಹ ಬಹುತೇಕ ಮಂದಿ ಟೀಕಿಸಿದ್ದಾರೆ. ಪಂದ್ಯಗಳಿಗಿಂತ ಮಕ್ಕಳ ಶಿಕ್ಷಣ ಮುಖ್ಯ ಎಂದು ಕೆಲವರು ಬುದ್ದಿ ಮಾತು ಹೇಳಿದ್ದಾರೆ. ಕೆಕೆಆರ್​ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯ ಇದಾಗಿತ್ತು.

​ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಕೆಲವು ವರ್ಷಗಳಾಗಿವೆ. ಕೇವಲ ಐಪಿಎಲ್​ ಟೂರ್ನಿಯಲ್ಲಿ(IPL 2024) ಮಾತ್ರ ಆಡುತ್ತಿದ್ದಾರೆ. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಹೀಗಾಗಿ ನೆಚ್ಚಿನ ಆಟಗಾರನ ಬ್ಯಾಟಿಂಗ್​ ಕುಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಪ್ರತಿ ಪಂದ್ಯದ ವೇಳೆ ಬಹಳ ನಿರೀಕ್ಷೆಯಿಂದ ಕಾಯುತ್ತಿರುತ್ತಾರೆ. ಬ್ಯಾಟಿಂಗ್​ಗೆ ಬಂದೊಡನೆಯೇ ಸಂಪೂರ್ಣ ಸ್ಟೇಡಿಯಂ ಧೋನಿ ಹೆಸರಿನಿಂದ ಝೇಂಕಾರಿಸುತ್ತದೆ.

ಇದನ್ನೂ ಓದಿ IPL 2024: ಪದಾರ್ಪಣ ಪಂದ್ಯದಲ್ಲೇ ದಾಖಲೆ ಬರೆದ ಜೇಕ್ ಫ್ರೇಸರ್-ಮೆಕ್‌ಗುರ್ಕ್

ಕೆಕೆಆರ್​ ಪಂದ್ಯದ ವೇಳೆ ಧೋನಿ ಬ್ಯಾಟಿಂಗ್​ಗೆ ಬಂದಾಗ ಅಭಿಮಾನಿಗಳು ಜೋರಾಗಿ ಧೋನಿಯ ಹೆಸರನ್ನು ಕೂಗಿದ್ದರು. ಈ ಗದ್ದಲಕ್ಕೆ ಎದುರಾಳಿ ತಂಡದ ಆ್ಯಂಡ್ರೆ ರಸೆಲ್​ ಬೇಸತ್ತು ತಮ್ಮ ಕಿವಿಯನ್ನು ಮುಚ್ಚಿಕೊಂಡಿದ್ದರು. ಇದರ ವಿಡಿಯೊ ವೈರಲ್​ ಆಗಿತ್ತು. ಒಟ್ಟಾರೆ ಮಹೇಂದ್ರ ಸಿಂಗ್‌ ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್ (ಭಾವನೆ). 

ನಿವೃತ್ತಿ ಬಳಿಕ ಏನು ಮಾಡಲಿದ್ದೀರ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಧೋನಿ. ಸದ್ಯಕ್ಕೆ ನಾನು ಕ್ರಿಕೆಟ್​ ಬಗ್ಗೆ ಮಾತ್ರ ಯೋಚಿಸುತ್ತಿದ್ದೇನೆ. ಆದರೆ ಒಂದಂತು ನಿಜ, ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕೆಲ ಕಾಲ ಆರ್ಮಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಅದು ನನ್ನ ಜೀವನದ ಪ್ರಮುಖ ಗುರಿ ಎಂದು ಮಾಹಿ ಹೇಳಿದ್ದರು.

Exit mobile version