ದುಬೈ: ತನಗೆ ಬೇಕಿಲ್ಲದ ಆಟಗಾರನೊಬ್ಬನನ್ನು ಐಪಿಎಲ್ ಹರಾಜಿನಲ್ಲಿ (IPL auction 2024, IPL 2024) ಪಂಜಾಬ್ ಕಿಂಗ್ಸ್ (PBKS, Punjab Kings) ತಂಡ ಪಡೆದ ವಿಲಕ್ಷಣ ಘಟನೆ ಹರಾಜು ಪ್ರಕ್ರಿಯೆಯ ಸಮಯದಲ್ಲಿ ನಡೆದಿದೆ.
ನಿನ್ನೆ ನಡೆದ ಐಪಿಎಲ್ ಆಟಗಾರರ ಹರಾಜಿನ ಸಂದರ್ಭದಲ್ಲಿ ಇದು ನಡೆಯಿತು. ಹರಾಜು ಪ್ರಕ್ರಿಯೆ ಬಿಸಿಯೇರಿದ ಸಂದರ್ಭದಲ್ಲಿ PBKS ಸೂಕ್ತ ಆಟಗಾರರಿಗಾಗಿ ತಡಕಾಡುತ್ತಿತ್ತು. ಅಶುತೋಷ್ ಶರ್ಮಾ ಮತ್ತು ವಿಶ್ವನಾಥ್ ಪ್ರತಾಪ್ ಸಿಂಗ್ ಅವರನ್ನು ಮೂಲ ಬೆಲೆ ₹20 ಲಕ್ಷಕ್ಕೆ ತಂಡ ಪಡೆಯಿತು. ನಂತರ ಶಶಾಂಕ್ ಸಿಂಗ್ ಅವರ ಸರದಿ ಬಂದಿತು.
PBKS ಸಹ ಮಾಲೀಕರಾದ ಪ್ರೀತಿ ಜಿಂಟಾ ತನ್ನ ತಂಡದ ಇತರ ಸದಸ್ಯರೊಂದಿಗೆ ಸಂಕ್ಷಿಪ್ತ ಚರ್ಚೆಯ ನಂತರ ಪ್ಯಾಡಲ್ ಅನ್ನು ಎತ್ತಿದರು. ಆರಂಭಿಕ ಬಿಡ್ ಸ್ವೀಕರಿಸಿದ ನಂತರ, ಹರಾಜುದಾರರಾದ ಮಲ್ಲಿಕಾ ಸಾಗರ್ ಅವರು ವಾಡಿಕೆಯ ವಿಧಾನವನ್ನು ಅನುಸರಿಸಿದರು. ಶಶಾಂಕ್‌ಗಾಗಿ ಹರಾಜು ಮೊತ್ತ ಇನ್ನಷ್ಟು ಎತ್ತರಿಸಲು ಬೇರೆ ಯಾವುದೇ ತಂಡ ಮುಂದಾಗಲಿಲ್ಲ. ಹೀಗಾಗಿ ಕೊನೆಯ ಸೂಚನೆ ನೀಡಿ ಶಶಾಂಕ್ ಖರೀದಿಯನ್ನು PBKSಗೆ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಖಚಿತಪಡಿಸಿ ಸುತ್ತಿಗೆ ಬಡಿದರು.
ಇದಾಗಿ ನಂತರದ ಆಟಗಾರ ತನಯ್ ತ್ಯಾಗರಾಜನ್ ಕಡೆಗೆ ಹರಾಜುದಾರರು ಮುಂದುವರಿದರು. ಆ ಕ್ಷಣದಲ್ಲಿ ಗೊಂದಲಕ್ಕೊಳಗಾಗಿದ್ದ PBSK ಸಹ-ಮಾಲೀಕ ನೆಸ್ ವಾಡಿಯಾ, ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಮತ್ತಿತರರು ತಮ್ಮ ತಮ್ಮಲ್ಲೇ ವಾಗ್ವಾದ ನಡೆಸಿ ಶಶಾಂಕ್ ಸಿಂಗ್ ತಮಗೆ ಬೇಡವೆಂದು ಸೂಚಿಸಿದರು.
“ನಿಮಗೆ ಆಟಗಾರ ಬೇಡವೇ? ಆದರೆ ಸುತ್ತಿಗೆ ಇಳಿದಿದೆ. ಆಟಗಾರನ ಸಂಖ್ಯೆ 236 ಮತ್ತು 237 ಇಬ್ಬರೂ ನಿಮ್ಮ ಬಳಿಗೆ ಹೋಗಿದ್ದಾರೆ” ಎಂದು ಮಲ್ಲಿಕಾ ಹೇಳಿದರು. ತಪ್ಪಾಗಿ ಶಶಾಂಕ್‌ಗೆ ಹರಾಜು ಹಾಕಿದೆವು ಎಂದು ವಾಡಿಯಾ ಹರಾಜುದಾರರಿಗೆ ತಿಳಿಸಿದರು. ಆದರೆ ಮಲ್ಲಿಕಾ ನಿರ್ಧಾರ ಬದಲಿಸಲಿಲ್ಲ. ನಿಯಮದ ಪ್ರಕಾರ ಹರಾಜು ಕೂಗುವಿಕೆ ಅಂತಿಮಗೊಂಡು ಸುತ್ತಿಗೆ ಇಳಿದ ಬಳಿಕ ಖರೀದಿಯನ್ನು ಮರಳಿಸುವಂತಿಲ್ಲ. ಹೀಗಾಗಿ ಶಶಾಂಕ್ ಸಿಂಗ್ ಪಂಜಾಬ್ ಕಿಂಗ್ಸ್ ತಂಡ ಸೇರಿದರು.
ಬಹುಶಃ ಈ ಗೊಂದಲಕ್ಕೆ ಕಾರಣ ಶಶಾಂಕ್ ಸಿಂಗ್ ಎಂಬ ಹೆಸರಿನ ಇಬ್ಬರು ಇದ್ದುದು ಎಂದು ಭಾವಿಸಲಾಗಿದೆ. ಇನ್ನೊಬ್ಬ ಶಶಾಂಕ್ ಸಿಂಗ್ ಹೊಸ ಆಟಗಾರ. ಈಗ ಪಂಜಾಬ್ ಕಿಂಗ್ಸ್ ಖರೀದಿಸಿರುವ ಶಶಾಂಕ್ ಸಿಂಗ್ (32) ಈಗಾಗಲೇ ಐಪಿಎಲ್‌ನ ಮೂರು ಸೀಸನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಛತ್ತೀಸ್‌ಘಡ ಮೂಲದ ಇವರು ಡೆಲ್ಲಿ ಕ್ಯಾಪಿಟಲ್ಸ್, ಮುಂಬಯಿ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಪರವಾಗಿ ಆಡಿದ್ದಾರೆ. 10 ಪಂದ್ಯಗಳನ್ನು ಆಡಿದ್ದು, ಕೇವಲ 69 ರನ್‌ಗಳನ್ನು ಪಡೆಯಲು ಸಾಧ್ಯವಾಗಿದೆ. ಈತ ಬಲಗೈ ಬ್ಯಾಟ್ಸ್‌ಮನ್ ಹಾಗೂ ಸ್ಪಿನ್ನರ್.
ಈ ಸಲ ಸಂಭವಿಸಿದ ಹರಾಜು ಪ್ರಮಾದ ಇದೊಂದೇ ಅಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸುಮೀತ್ ಕುಮಾರ್ ಬದಲಿಗೆ ಸುಮೀತ್ ವರ್ಮಾಗೆ ಬಿಡ್ ಮಾಡಿತ್ತು. ಆದರೆ ಕೂಡಲೇ ತನ್ನ ತಪ್ಪನ್ನು ಅರಿತು, ಸುತ್ತಿಗೆ ಬೀಳುವ ಮೊದಲೇ ಈ ಖರೀದಿಯಿಂದ ತಂಡ ಹಿಂದೆಗೆದುಕೊಂಡಿತು.
ಇದನ್ನೂ ಓದಿ: IPL 2024 Auction : ಆಟಗಾರರನ್ನು ಖರೀದಿಸಿದ ಬಳಿಕ ಆರ್ಸಿಬಿ ತಂಡ ಈ ರೀತಿ ಇದೆ