ಅಹಮದಾಬಾದ್: ಬುಧವಾರ ರಾತ್ರಿ ನಡೆದ ಐಪಿಎಲ್(IPL 2024) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡ ಗುಜರಾತ್ ಟೈಟಾನ್ಸ್(Gujarat Titans) ವಿರುದ್ಧ 6 ವಿಕೆಟ್ಗಳ ಅಂತರದಿಂದ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 POINTS TABLE) ಬರೋಬ್ಬರಿ 3 ಸ್ಥಾನಗಳ ಜಿಗಿತ ಕಂಡು 6ನೇ ಸ್ಥಾನಕ್ಕೆ ಬಂದು ನಿಂತಿದೆ. ಈ ಗೆಲುವಿಗೂ ಮುನ್ನ ಡೆಲ್ಲಿ 9ನೇ ಸ್ಥಾನದಲ್ಲಿತ್ತು. ಇದೀಗ ಡೆಲ್ಲಿ ಗೆಲುವಿನಿಂದಾಗಿ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ.
ನೂತನ ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 7 | 6 | 1 | 12 (+0.677) |
ಕೆಕೆಆರ್ | 6 | 4 | 2 | 8 (+1.399) |
ಚೆನ್ನೈ ಸೂಪರ್ ಕಿಂಗ್ಸ್ | 6 | 4 | 2 | 8 (+0.726) |
ಹೈದರಾಬಾದ್ | 6 | 4 | 2 | 8(+0.502) |
ಲಕ್ನೋ | 6 | 3 | 3 | 6 (+0.038) |
ಡೆಲ್ಲಿ ಕ್ಯಾಪಿಟಲ್ಸ್ | 7 | 3 | 4 | 6 (-0.074) |
ಗುಜರಾತ್ | 7 | 3 | 4 | 6 (-1.303) |
ಪಂಜಾಬ್ | 6 | 2 | 4 | 4 (-0.218) |
ಮುಂಬೈ | 6 | 2 | 4 | 4 (-0.234) |
ಆರ್ಸಿಬಿ | 7 | 1 | 6 | 2 (-1.185) |
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಡೆಲ್ಲಿ(Delhi Capitals) ತಂಡಕ್ಕೆ. ಬೌಲರ್ಗಳು ತಮ್ಮ ಘಾತಕ ದಾಳಿಯ ಮೂಲಕ ಎದುರಾಳಿ ಗುಜರಾತ್ ತಂಡವನ್ನು 89 ರನ್ಗಳಿಗೆ ಆಲೌಟ್ ಮಾಡಿದರು. ಸಾಧಾರಣ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ 8.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಚೇಸಿಂಗ್ ವೇಳೆ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರ ಈ ಆಕ್ರಮಣಕಾರಿ ಬ್ಯಾಟಿಂಗ್ನಿಂದಾಗಿ 2 ಓವರ್ ಮುಕ್ತಾಯಗೊಳ್ಳುವ ಮುನ್ನವೇ ತಂಡಕ್ಕೆ 25 ರನ್ ಹರಿದುಬಂತು. ಆದರೆ ಇವರ ಈ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಪೆನ್ಸರ್ ಜಾನ್ಸನ್ ಎಸೆದ ವೈಡ್ ಲೆಂತ್ ಬಾಲ್ನ ಮರ್ಮವನರಿಯದೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಅವರ ಗಳಿಕ 10 ಎಸೆತಗಳಿಂದ 20 ರನ್. ಈ ವಿಕೆಟ್ ಪತನದ ಬಳಿಕ ಆಡಲಿಳಿದ ಅಭಿಷೇಕ್ ಪೋರೆಲ್(15) ಮತ್ತು ಶಾಯ್ ಹೋಪ್(19) ಬೇಗನೆ ವಿಕೆಟ್ ಕಳೆದುಕೊಂಡು ತಂಡಕ್ಕೆ ಆತಂಕ ತಂದೊಡ್ಡಿದರು. ಈ ವೇಳೆ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ನಾಯಕ ಪಂತ್(16) ಮತ್ತು ಸುಮೀತ್ ಕುಮಾರ್(9) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್ ಪರ ಸಂದೀಪ್ ವಾರಿಯರ್ 2 ವಿಕೆಟ್ ಕಿತ್ತರು.
ಇದನ್ನೂ ಓದಿ IPL 2024: ಕೆಕೆಆರ್ ಸೋಲು ಕಂಡು ಕಣ್ಣೀರು ಸುರಿಸಿದ ನಟ ಶಾರೂಖ್ ಖಾನ್; ಫೋಟೊ ವೈರಲ್
Ensuring a quick finish, ft Rishabh Pant & Sumit Kumar 🙌
— IndianPremierLeague (@IPL) April 17, 2024
A comprehensive all-round performance from Delhi Capitals helps them register their 3️⃣rd win of the season 😎
Recap the match on @StarSportsIndia and @JioCinema 💻📱#TATAIPL | #GTvDC pic.twitter.com/c2pyHArwE7
ಇನಿಂಗ್ಸ್ ಆರಂಭಿಸಿದ ಗುಜರಾತ್ ತಂಡದ ಬ್ಯಾಟರ್ಗಳು ಡೆಲ್ಲಿ ಬೌಲರ್ಗಳಾದ ಇಶಾಂತ್ ಶರ್ಮ, ಮುಕೇಶ್ ಕುಮಾರ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರ ಕರಾರುವಾಕ್ ಬೌಲಿಂಗ್ ಎದುರು ಅಬ್ಬರಿಸಲು ವಿಫಲರಾದರು. ನಾಯಕ ಶುಭಮನ್ ಗಿಲ್(8), ವೃದ್ಧಿಮಾನ್ ಸಾಹಾ(2), ಡೇವಿಡ್ ಮಿಲ್ಲರ್(2), ಅಭಿನವ್ ಮನೋಹರ್(8) ಮತ್ತು ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾನ್ನಾಡಿದ ಶಾರುಖ್ ಖಾನ್(0) ಸಿಂಗಲ್ ಡಿಜಿಟ್ಗೆ ಸೀಮಿತರಾಗಿ ಪೆವಿಲಿಯನ್ ಪರೇಡ್ ನಡೆಸಿದರು.
ಇನ್ನೇನು ತಂಡ 50ರನ್ ಒಳಗಡೆ ಗಂಟು-ಮೂಟೆ ಕಟ್ಟುತ್ತದೆ ಎನ್ನುವ ಹಂತದಲ್ಲಿ 8ನೇ ಕ್ರಮಾಂಕದಲ್ಲಿ ಆಡಲಿಳಿದ ರಶೀದ್ ಖಾನ್ ಏಕಾಂಗಿ ಹೋರಾಟ ನಡೆಸಿ 24 ಎಸೆತಗಳಿಂದ 31 ರನ್ ಚಚ್ಚಿ ತಂಡದ ಮೊತ್ತವನ್ನು 80ರ ಗಡಿ ದಾಟಿಸಿ ಮಾನ ಉಳಿಸಿದರು. ಒಟ್ಟಾರೆಯಾಗಿ ತಂಡದ ಪರ ಮೂರು ಮಂದಿ ಮಾತ್ರ ಎರಡಂಕಿ ಮೊತ್ತ ಕಲೆಹಾಕುವಲ್ಲಿ ಯಶಸ್ಸು ಕಂಡರು. ಸಾಯಿ ಸುದರ್ಶನ್(12) ಮತ್ತು ರಾಹುಲ್ ತೆವಾಟಿಯ(10) ರನ್ ಬಾರಿಸಿದರು.