Site icon Vistara News

IPL 2024 : ಅಭಿಮಾನಿಗಳಿಗೆ ಸತಾಯಿಸಿ ಖುಷಿ ಕೊಟ್ಟ ಆರ್​ಸಿಬಿ, ಗುಜರಾತ್​ ವಿರುದ್ಧ 4 ವಿಕೆಟ್​ ಜಯ

IPL 2024

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರು ನೆಲದ ತನ್ನ ಅಭಿಮಾನಿಗಳಿಗೆ ಭರ್ಜರಿ ಖುಷಿ ಕೊಟ್ಟಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್​ (IPL 2024) ಪಂದ್ಯದಲ್ಲಿ 4 ವಿಕೆಟ್​ ಗೆಲುವು ದಾಖಲಿಸುವ ಮೂಲಕ ಹ್ಯಾಟ್ರಿಕ್​ ವಿಜಯವನ್ನು ತನ್ನದಾಗಿಸಿಕೊಂಡಿದೆ. ಆದರೆ ಮೊದಲು ಎಲ್ಲರಿಗೂ ಒಂದು ಬಾರಿ ಭಯ ಹುಟ್ಟಿಸಿ ಬಳಿಕ ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ಆಡಿರುವ 11 ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ಒಟ್ಟಾರೆ 8 ಅಂಕಗಳನ್ನು ಗಳಿಸಿರುವ ಆರ್​ಸಿಬಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಿಂದ ಮೇಲಕ್ಕೆದ್ದು 7ನೇ ಸ್ಥಾನಕ್ಕೆ ಜಿಗಿದಿದೆ. ಮುಂಬಯಿ ಇಂಡಿಯನ್ಸ್​ ಬಳಗವನ್ನು 10ನೇ ಸ್ಥಾನಕ್ಕೆ ತಳ್ಳಿದ್ದು, ಗುಜರಾತ್​ 9 ಹಾಗೂ ಪಂಜಾಬ್ ಅದಕ್ಕಿಂತ ಮೇಲಿನ ಕ್ರಮಾಂಕದಲ್ಲಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​​ಸಿಬಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಗುಜರಾತ್ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಕಾರಣ 19.3 ಓವರ್​ಗಳಲ್ಲಿ 147 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಆರ್​ಸಿಬಿ ಉತ್ತಮ ಆರಂಭವನ್ನೇ ಪಡೆಯಿತು. ಫಾಫ್​ ಡು ಪ್ಲೆಸಿಸ್​ 23 ಎಸೆತಕ್ಕೆ 63 ರನ್ ಬಾರಿಸಿದರು. ಕೇವಲ 3.1 ಓವರ್​ಗಳಲ್ಲಿ 50 ರನ್ ಗಡಿ ದಾಟಿಸಿದ ಕೊಹ್ಲಿ ಮತ್ತು ಫಾಪ್​ ಗೆಲುವು ಸುಲಭ ಎಂದು ಅಂದುಕೊಳ್ಳುವಂತೆ ಮಾಡಿದರು. ಈ ಜೋಡಿ ಮೊದಲ ವಿಕೆಟ್​ಗೆ 5.5 ಓವರ್​ಗಳಲ್ಲಿ 92 ರನ್ ಬಾರಿಸಿತು. ಹೀಗಾಗಿ ಕೆಲವೇ ಓವರ್​ಗಳಲ್ಲಿ ಆರ್​ಸಿಬಿ ಗೆಲ್ಲುತ್ತದೆ ಎಂದು ಅಂದುಕೊಳ್ಳಲಾಯಿತು.

ಒಂದು ಬಾರಿ ಫಾಫ್​ ಡು ಪ್ಲೆಸಿಸ್ ಔಟಾದ ಬಳಿಕ ಆರ್​ಸಿಬಿಯ ರೋದನೆ ಶುರುವಾಯಿತು. ವಿಲ್​ ಜಾಕ್ಸ್​ 1 ರನ್​, ರಜತ್ ಪಾಟೀದಾರ್​ 2 ರನ್​, ಗ್ಲೆನ್​ ಮ್ಯಾಕ್ಸ್​ವೆಲ್​ 4 ರನ್​, ಕ್ಯಾಮೆರೂನ್ ಗ್ರೀನ್​ 1 ರನ್​ಗೆ ಔಟಾದರು. ಸ್ವಲ್ಪ ಹೊತ್ತಿನಲ್ಲಿ ವಿರಾಟ್​ ಕೊಹ್ಲಿಯೂ 42 ರನ್ ಬಾರಿಸಿ ಔಟಾದರು. 117 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡ ಆರ್​ಸಿಬಿ ಅಭಿಮಾನಿಗಳಿಗೆ ಆತಂಕ ಉಂಟು ಮಾಡಿದರು. ಅದರೆ, ಕೊನೆಯಲ್ಲಿ ಪಿನಿಶರ್ ದಿನೇಶ್ ಕಾರ್ತಿಕ್​ 21 ರನ್ ಹಾಗೂ ಸ್ವಪ್ನಿಲ್​ ಸಿಂಗ್ 15 ರನ್ ಬಾರಿಸಿ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: Virat kohli : ಸಿಕ್ಸರ್ ಹೊಡೆದು ಕಿಂಗ್​ ಥರ ಪೋಸ್​​ ಕೊಟ್ಟ ಕೊಹ್ಲಿ, ಇಲ್ಲಿದೆ ವಿಡಿಯೊ

ಗೆಲುವಿನ ಹತ್ತಿರಕ್ಕೆ ಬಂದಿದ್ದ ಆರ್​ಸಿಬಿಗೆ ಗುಜರಾತ್​ ಬೌಲರ್​ಗಳು ಒತ್ತಡ ತಂದರು. ಜೋಶ್ ಲಿಟರ್​ 4 ವಿಕೆಟ್​ ಹಾಗೂ ನೂರ್ ಅಹಮದ್​ 2 ವಿಕೆಟ್ ಪಡೆದು ಗೆಲುವಿಗೆ ಯತ್ನಿಸಿದರು. ಆದರೆ, ಆರ್​ಸಿಬಿ ಪೇಚಾಡಿ ಗೆಲುವು ಕಂಡಿತು.

ಗುಜರಾತ್ ಬ್ಯಾಟಿಂಗ್ ವೈಫಲ್ಯ

ಬ್ಯಾಟಿಂಗ್ ಆರಂಭಿಸಿದ ಗುಜರಾತ್​​ ಸ್ಥಿರವಾಗಿ ಆಡಲಿಲ್ಲ. ವೃದ್ಧಿಮಾನ್​ ಸಾಹ (1 ರನ್​), ಶುಭ್​​ಮನ್​ ಗಿಲ್​ (2 ರನ್​), ಸಾಯಿ ಸುದರ್ಶನ್​ (6 ರನ್ ) ಬೇಗ ಔಟಾದ ಕಾರಣ ಉತ್ತಮ ಆರಂಭ ಸಿಗಲಿಲ್ಲ. 19 ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಬಳಿಕ ಶಾರುಖ್​ ಖಾನ್​ (37 ರನ್​), ಡೇವಿಡ್​ ಮಿಲ್ಲರ್​ (30), ರಾಹುಲ್ ತೆವಟಿಯಾ(35), ರಶೀದ್ ಖಾನ್​ (18) ಬಾರಿಸಿ ಸುತ್ತಮ ಮೊತ್ತ ಪೇರಿಸಲು ನೆರವಾದರು. ಆರ್​ಸಿಬಿ ಪರ ಯಶ್​ ದಯಾಳ್​, ಮೊಹಮ್ಮದ್ ಸಿರಾಜ್​, ವಿಜಯ್​​ ಕುಮಾರ್ ವೈಶಾಖ್​ ತಲಾ 2 ವಿಕೆಟ್ ಉರುಳಿಸಿದರು.

Exit mobile version