ಬೆಂಗಳೂರು: ಐಪಿಎಲ್ ಟೂರ್ನಿ(IPL 2024) ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ(virat kohli) ಇದು ಆರ್ಸಿಬಿಯ ಹೊಸ ಅಧ್ಯಾಯ ಎಂದು ಹೇಳುವು ಮೂಲಕ ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಈ ಮಾತಿಗೆ ತಕ್ಕಂತೆ ಮೊದಲ ಹಂತದಲ್ಲಿ ಆರ್‌ಸಿಬಿ(RCB players) ಪ್ರದರ್ಶನ ನೀಡಲು ವಿಫಲವಾಗಿತ್ತು. 7 ಸೋಲು ಕಂಡು ಇನ್ನೇನು ಟೂರ್ನಿಯಿಂದ ಹೊರಬೀಳುವ ಸ್ಥಿತಿಯಲ್ಲಿತ್ತು. ಆರ್‌ಸಿಬಿ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಇದು ಮುಗಿದು ಹೋದ ಅಧ್ಯಾಯ ಎಂದು ಬೇಸರ ಹೊರಹಾಕಿದ್ದರು. ಆದರೆ ಆ ಬಳಿಕ ನಡೆದದ್ದೇ ಬೇರೆ. ಪವಾಡ ಸಂಭವಿಸಿದೆ ಆರ್‌ಸಿಬಿ ಸತತವಾಗಿ 6 ಪಂದ್ಯಗಳನ್ನು ಒಟ್ಟು 7 ಪಂದ್ಯಗಳಲ್ಲಿ ಜಯ ಸಾಧಿಸಿ ಕೊನೆಯ ಸ್ಥಾನದಿಂದ ಮೇಲೆದ್ದು ಅಚ್ಚರಿ ಎಂಬಂತೆ ಪ್ಲೇ ಆಫ್ ಪ್ರವೇಶಿಸಿತ್ತು. ಇದೀಗ ಬುಧವಾರ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್(RCB vs RR) ವಿರುದ್ಧ ಆಡಲಿದೆ.
ಆರ್‌ಸಿಬಿ ತಂಡದ ಆಟಗಾರರು ರಾಜಸ್ಥಾನ್ ವಿರುದ್ಧ ಎಲಿಮಿನೇಟರ್ ಪಂದ್ಯವನ್ನಾಡಲು ಈಗಾಗಲೇ ಅಹಮದಾಬಾದ್ಗೆ ತಲುಪಿದ್ದಾರೆ. ಸೋಮವಾರ ಆಟಗಾರರು ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಫುಟ್ಬಾಲ್ ಆಡುವ(RCB players played football) ಮೂಲಕ ತಮ್ಮ ಫಿಟ್ನೆಸ್ ತರಬೇತಿ ಮುಗಿಸಿದ್ದಾರೆ. ಆಟಗಾರರು 2 ತಂಡಗಳಾಗಿ ಫುಟ್ಬಾಲ್ ಆಡಿದ ವಿಡಿಯೊವನ್ನು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ.
ಕಳೆದ 5 ವರ್ಷದಲ್ಲಿ ಆರ್‌ಸಿಬಿ 4 ಬಾರಿ ಪ್ಲೇ ಆಫ್ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಮೂಲಕ ಆರ್‌ಸಿಬಿ ನಿರಂತವಾಗಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. 3 ಬಾರಿ ಫೈನಲ್ ಪ್ರವೇಶೀಸಿದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. 2009, 2011 ಮತ್ತು 2016ರಲ್ಲಿ ಆರ್‌ಸಿಬಿ ಫೈನಲ್ಗೆ ಲಗ್ಗೆಯಿಟ್ಟಿತ್ತು.
ಎಲಿಮಿನೇಟರ್(IPL 2024 Eliminator) ಪಂದ್ಯಕ್ಕೂ ಮುನ್ನವೇ ಆರ್ಸಿಬಿಗೆ ದೊಡ್ಡ ಆಘಾತವೊಂದು ಎದುರಾಗಿದೆ. ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ನಡೆಸುವ ಸಲುವಾಗಿ ರಾಷ್ಟ್ರೀಯ ತಂಡದಿಂದ ಕರೆ ಬಂದರೆ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ಗಳಾದ ಕ್ಯಾಮರೂನ್ ಗ್ರೀನ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ತಂಡ ತೊರೆಯಬೇಕಾಗಿದೆ.
ಈಗಾಗಲೇ ಇಂಗ್ಲೆಂಡ್ನ ಆಟಗಾರರು ಐಪಿಎಲ್ ಪಂದ್ಯವಾವಳಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಮರಳಿದ್ದಾರೆ. ಇದೀಗ ಆಸ್ಟ್ರೇಲಿಯಾ ಸರದಿ ಎನ್ನಲಾಗಿದೆ. ಕೇವಲ ಆರ್‌ಸಿಬಿ ಮಾತ್ರವಲ್ಲದೆ ಇತರ ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾ ಆಟಗಾರರು ಕೂಡ ಐಪಿಎಲ್ ತೊರೆಬೇಕಾಗಬಹುದು. ಎಂದು ವರದಿಯಾಗಿದೆ. ಒಂದೊಮ್ಮೆ ಆಸೀಸ್ ಆಟಗಾರರು ಐಪಿಎಲ್ನಿಂದ ಹೊರಹೋದರೆ ಸನ್ರೈಸರ್ಸ್ ಮತ್ತು ಆರ್‌ಸಿಬಿ ತಂಡಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ಈ 2 ತಂಡಗಳಲ್ಲಿಯೇ ತಲಾ 2 ಆಸೀಸ್ ಆಟಗಾರರಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳು ಮೇ 27ರಿಂದ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ನಮೀಬಿಯಾ ವಿರುದ್ಧ ಮೇ 29ಕ್ಕೆ ಆಡಲಿದೆ. ಒಂದೊಮ್ಮೆ ಆಸೀಸ್ ಆಟಗಾರರು ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಪಂದ್ಯದಲ್ಲಿ ಆಡಿದರೂ ಕೂಡ ಫೈನಲ್ ತನಕ ಭಾರತದಲ್ಲಿ ನಿಲ್ಲುವುದು ಅನುಮಾನ ಎನ್ನಲಾಗಿದೆ.