ಬೆಂಗಳೂರು: ಮುಂಬರುವ ಐಪಿಎಲ್(IPL 2024) ಟೂರ್ನಿಗೆ ಈಗಾಗಲೇ ಹಲವು ಫ್ರಾಂಚೈಸಿಗಳು ನೂತನ ಕೋಚ್ಗಳನ್ನು ನೇಮಕ ಮಾಡಿದೆ. ಇದೀಗ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)(Royal Challengers Bangalore) ತಂಡವೂ ಮೇಜರ್ ಸರ್ಜರಿ ನಡೆಸಲು ಮುಂದಾಗಿದೆ. ಕೋಚ್ ಆಗಿರುವ ಸಂಜಯ್ ಬಂಗಾರ್(Sanjay Bangar) ಮತ್ತು ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್(Mike Hesson) ಅವರಿಗೆ ಗೇಟ್ ಪಾಸ್ ನೀಡಲಿದೆ ಎಂದು ವರದಿಯಾಗಿದೆ.
ಐಪಿಎಲ್ನ ನತದೃಷ್ಟ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿ ಪ್ರತಿ ಬಾರಿಯೂ ಈ ಸಲ ಕಪ್ ನಮ್ದೇ ಎಂದು ಹೇಳುತ್ತಲೇ ಬಾರುತ್ತಿದೆ. ಆದರೆ ಇದುವರೆಗೂ ಕಪ್ ಕನಸು ಮಾತ್ರ ನನಸಾಗಿಯೇ ಇಲ್ಲ. ಸ್ವತಃ ಕನ್ನಡಿಗರು ಕೂಡ ಈ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಹೆಸರಿಗೆ ಮಾತ್ರ ಬೆಂಗಳೂರು ತಂಡ, ಒಬ್ಬ ಕನ್ನಡಿಗನಿಗೂ ಅವಕಾಶ ನೀಡುವುದಿಲ್ಲ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಇದೀಗ ಫ್ರಾಂಚೈಸಿ ಮುಂದಿನ ಆವೃತ್ತಿಗೆ ತಂಡದಲ್ಲಿ ಹಲವು ಬದಲಾವಣೆ ಮಾಡಲು ಮುಂದಾಗಿದೆ.
ಮೂಲಗಳ ಪ್ರಕಾರ ಮಾಜಿ ಕನ್ನಡಿಗ ಆಟಗಾರನನ್ನು ಕೋಚ್ ಮತ್ತು ಸಹಾಯಕ ಕೋಚ್ ಆಗಿ ನೇಮಕ ಮಾಡಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಕೆಲವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ. ಒಟ್ಟಾರೆ 2024 ರಲ್ಲಿ ಆರ್ಸಿಬಿ ತಂಡದಲ್ಲಿ ಹೊಸ ಕೋಚ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ.
ಇದನ್ನೂ ಓದಿ Yuzvendra Chahal: ಆರ್ಸಿಬಿಯ ಈ ನಿರ್ಧಾರಕ್ಕೆ ಕೋಪ ವ್ಯಕ್ತಪಡಿಸಿದ ಚಹಲ್
2022 ರಿಂದ ಆರ್ಸಿಬಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜಯ್ ಬಂಗಾರ್ ಅವರ ಒಪ್ಪಂದ ಮುಗಿದಿದೆ. ಅವರ ಕಾರ್ಯಾವಧಿಯಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಅವರೊಂದಿಗಿನ ಒಪ್ಪಂದವನ್ನು ಫ್ರಾಂಚೈಸಿ ನವೀಕರಿಸಿಲ್ಲ ಎಂದು ತಿಳಿದುಬಂದಿದೆ. ಇದರ ಜತೆಗೆ ಕಳೆದ ನಾಲ್ಕು ವರ್ಷಗಳಿಂದ ತಂಡದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೈಕ್ ಹೆಸ್ಸನ್ ಅವರ ಕಾರ್ಯಾವಧಿ ಈ ವರ್ಷಕ್ಕೆ ಕೊನೆಗೊಳ್ಳಲಿದೆ. ಅವರ ಒಪ್ಪಂದವನ್ನು ನವೀಕರಿಸುವುದು ಅನುಮಾನ ಎನ್ನಲಾಗಿದೆ.
ಆರ್ಸಿಬಿ ಕೊನೆಯ ಬಾರಿಗೆ 2016ರಲ್ಲಿ ಫೈನಲ್ ಪ್ರವೇಶ ಪಡೆದಿತ್ತು. ಇದಾಗ ಬಳಿಕ ತಂಡ ಒಮ್ಮೆಯೂ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿಲ್ಲ. 2020, 2021 ಹಾಗೂ 2022 ರಲ್ಲಿ ಪ್ಲೇಆಫ್ ಪ್ರವೇಶ ಪಡೆದಿತ್ತು. ಈ ಬಾರಿ ಮೊದಲ ಸುತ್ತಿನಲ್ಲೇ ಅದರಲ್ಲೂ ತವರಿನಲ್ಲೇ ಸೋತು ಹೊರಬಿದ್ದಿತ್ತು. ಇದಕ್ಕೂ ಮುನ್ನ 2009 ಮತ್ತು 2011ರಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಅಲ್ಲಿಯೂ ಸೋಲು ಕಂಡಿತ್ತು. ಒಟ್ಟಾರೆ ಆರ್ಸಿಬಿ ಮೂರು ಬಾರಿ ಫೈನಲ್ ಪ್ರವೇಶಿಸಿ ರನ್ನರ್ಅಪ್ ಸ್ಥಾನ ಪಡೆದಿದೆ.