Site icon Vistara News

IPL 2024 : ಐಪಿಎಲ್​ 17ನೇ ಆವೃತ್ತಿಯಲ್ಲಿ ಆರ್​ಸಿಬಿ ಅಭಿಯಾನ ಅಂತ್ಯ; ರಾಜಸ್ಥಾನ್​ 2ನೇ ಕ್ವಾಲಿಫೈಯರ್​ಗೆ

IPL 2024

ಅಹಮದಾಬಾದ್​​​: ಬೌಲರ್​ಗಳ ಸಂಘಟಿತ ಹೋರಾಟ ಹಾಗೂ ಯಶಸ್ವಿ ಜೈಸ್ವಾಲ್ (45 ರನ್​) ಹಾಗೂ ರಿಯಾನ್ ಪರಾಗ್​ (36 ರನ್​) ಬ್ಯಾಟಿಂಗ್ ಬಲದಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್​ 2024ರ (IPL 2024) ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 4 ವಿಕೆಟ್​ಗಳ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಸತತ ನಾಲ್ಕು ಸೋಲು ಹಾಗೂ ಮಳೆಯಿಂದಾಗಿ ಒಂದು ಪಂದ್ಯ ರದ್ದುಗೊಂಡ ಕಾರಣ ಬೇಸರಕ್ಕೆ ಒಳಗಾಗಿದ್ದ ರಾಜಸ್ಥಾನ್ ಬಳಗ ಈ ಗೆಲುವಿನೊಂದಿಗೆ ಖುಷಿ ಕಂಡು ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಅಲ್ಲಿ ಸಂಜು ಬಳಗ ಮೊದಲ ಕ್ವಾಲಿಫೈಯರ್​ನಲ್ಲಿ ಸೋತ ಸನ್​ ರೈಸರ್ಸ್​ ಹೈದರಾಬಾದ್​ ತಂಡವನ್ನು ಎದುರಿಸಲಿದೆ.

ಈ ಸೋಲಿನೊಂದಿಗೆ ಆರ್​ಸಿಬಿ ತಂಡದ 2024ರ ಐಪಿಎಲ್​ ಅಭಿಯಾನ ಮುಕ್ತಾಯಗೊಂಡಿತು. ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿರುವುದೇ ರೆಡ್​ ಆರ್ಮಿಯ ದೊಡ್ಡ ಸಾಧನೆ ಎನಿಸಿಕೊಂಡಿತು. ಜತೆಗೆ ಆರ್​​ಸಿಬಿಯ ಅಪಾರ ಅಭಿಮಾನಿಗಳ ಹೃದಯ ಛಿದ್ರಗೊಂಡಿತು. ಈ ಬಾರಿಯಾದರೂ ಕಪ್​ ಗೆಲ್ಲಬೇಕೆಂಬ ಆಸೆ ಕಮರಿತು. ಕಷ್ಟದಲ್ಲಿ ಪ್ಲೇಆಫ್​ ಹಂತಕ್ಕೇರಿದ ಹೊರತಾಗಿಯೂ ಮುಂದಿನ ಹಂತಕ್ಕೆ ಹೋಗಲು ಸಾಧ್ಯವಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಚೆನ್ನೈ ವಿರುದ್ಧದ ಲೀಗ್ ಪಂದ್ಯದಲ್ಲಿ ಹೆಚ್ಚು ನಿಖರವಾಗಿ ಆಡಿದ್ದ ಆರ್​ಸಿಬಿ ಈ ಪಂದ್ಯದಲ್ಲಿ ನಿರ್ಲಕ್ಷ್ಯ ತೋರಿತು. ಬ್ಯಾಟಿಂಗ್​ನಲ್ಲಿ ಅನಗತ್ಯವಾಗಿ ವಿಕೆಟ್​ ಒಪ್ಪಿಸಿದರೆ ಬೌಲಿಂಗ್ ವೇಳೆಯೂ ಕ್ಯಾಚ್​ ಕೈಚೆಲ್ಲಿ, ಕಳಪೆ ಫೀಲ್ಡಿಂಗ್ ಮಾಡಿ, ರನ್​ಔಟ್​ ಚಾನ್ಸ್​ ಕಳೆದುಕೊಂಡಿತು. ಇದು ಸೋಲಿಗೆ ಕಾರಣವಾಯಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಹೊರಟ ರಾಜಸ್ಥಾನ್ ತಂಡಕ್ಕೆ ಆರಂಭದಲ್ಲಿ ರನ್​ ಗಳಿಸಲು ಕಷ್ಟವಾಯಿತು. ಆದರೆ ಆ ಬಳಿಕ ಯಶಸ್ವಿ ಜೈಸ್ವಾಲ್​ ಸ್ಕೋರ್​ ಹೆಚ್ಚಿಸುವ ಮಾರ್ಗ ಕಂಡುಕೊಂಡರು. ಅವರು 30 ಎಸೆತಕ್ಕೆ 45 ರನ್​ ಬಾರಿಸಿ ಅಗತ್ಯ ಆರಂಭ ಕೊಟ್ಟರು. ಟಾಮ್​ ಕ್ಯಾಡ್​ಮೋರ್​ 20 ರನ್​ ಗೆಔಟಾದರೆ ಸಂಜು ಸ್ಯಾಮ್ಸನ್​ 17 ರನ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರಿಸ್​ಗೆ ಬಂದ ರಿಯಾನ್ ಪರಾಗ್ (36 ರನ್​) ಮತ್ತೊಂದು ಉಪಯುಕ್ತ ಇನಿಂಗ್ಸ್​ನೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು. ಹೆಟ್ಮಾಯರ್​ 26 ರನ್ ಕೊಡುಗೆ ಕೊಟ್ಟಿತು.

ಈ ಬಾರಿ ಮಿಂಚದ ಬ್ಯಾಟರ್​ಗಳು

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡದ ಆರಂಭ ನಿರೀಕ್ಷಿತವಾಗಿರಲಿಲ್ಲ. ಕೊಹ್ಲಿ ಸ್ವಲ್ಪ ಚೈತನ್ಯ ತೋರಿದರೂ ಫಾಫ್​ ಡು ಪ್ಲೆಸಿಸ್​ ತಿಣುಕಾಡಲು ಶುರು ಮಾಡಿದ್ದರು. ಆದಾಗ್ಯೂ ಆರಂಭಿಕರು ಮೊದಲ ವಿಕೆಟ್​ಗೆ 37 ಬೇರ್ಪಟ್ಟರು. ಬೌಲ್ಟ್​ ಎಸೆತಕ್ಕೆ ದೊಡ್ ಹೊಡೆದ ಬಾರಿಸಲು ಮುಂದಾದ ಫಾಫ್​ ಡು ಪ್ಲೆಸಿಸ್​ ರೋವ್ಮನ್ ಪೊವೆಲ್​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಅದಕ್ಕಿಂತ ಮೊದಲು ಅವರು 17 ರನ್ ಬಾರಿಸಿದರು. ನಂತರ ಆಡಲು ಬಂದ ಕ್ಯಾಮೆರಾನ್ ಗ್ರೀನ್​ 21 ಎಸೆತಕ್ಕೆ 27 ರನ್ ಬಾರಿಸಿದರು. ಅವರು ಔಟಾಗುವ ಮೊದಲು ಕೊಹ್ಲಿಯ ವಿಕೆಟ್​ ಪತನಗೊಂಡಿತು. 24 ಎಸೆತಕ್ಕೆ 33 ರನ್ ಬಾರಿಸಿದ್ದ ಕೊಹ್ಲಿ ಚಹಲ್ ಎಸೆತಕ್ಕೆ ಔಟಾದರು.

ಬಳಿಕ ಬಂದ ರಜತ್ ಪಾಟೀದಾರ್ ಉತ್ತಮ ಮೊತ್ತ ಪೇರಿಸುವ ಲಕ್ಷಣ ತೋರಿದರೂ 34 ರನ್​ಗೆ ಸೀಮಿತಗೊಂಡರು. ಆರ್​ಆರ್​ ಬೌಲರ್​ಗಳು ಆ ಬಳಿಕ ಮೇಲುಗೈ ಸಾಧಿಸಿದರು. ಗ್ಲೆನ್ ಮ್ಯಾಕ್ಸ್​ ಮತ್ತೊಂದು ಬಾರಿ ಬೇಜವಾಬ್ದಾರಿ ಆಟವಾಡಿ ಶೂನ್ಯಕ್ಕೆ ಔಟಾದರು. ಬಳಿಕ ಮಹಿಪಾಲ್ ಲಾಮ್ರೋರ್​ 32 ರನ್​ ಗಳಿಸಿ ಸ್ಪರ್ಧಾತ್ಮಕ ಮೊತ್ತಕ್ಕೆ ನೆರವಾದರು. ದಿನೇಶ್​ ಕಾರ್ತಿಕ್​ ಕಡೆಯಿಂದ ಹೆಚ್ಚು ರನ್ ಮೂಡಿ ಬರಲಿಲ್ಲ. ಅವರು 11 ರನ್​ಗೆ ಸೀಮಿತಗೊಂಡರು.

Exit mobile version